

ಮೈಸೂರು: ಸಾಂಸ್ಕೃತಿಕ ನಗರ ಎನಿಸಿಕೊಂಡಿರುವ ಮೈಸೂರಿನಲ್ಲಿ ಒಂದು ಸುಸಜ್ಜಿತ, ಸುಂದರ ಕಲಾ ಗ್ಯಾಲರಿ ಇಲ್ಲದಿರುವುದು ಬೇಸರದ ಸಂಗತಿ ಎಂದು ಮೈಸೂರು ಆರ್ಟ್ ಗ್ಯಾಲರಿ ಸ್ಥಾಪಕ ಅಧ್ಯಕ್ಷ, ಹಿರಿಯ ಕಲಾವಿದ ಎಲ್.ಶಿವಲಿಂಗಪ್ಪ ಬೇಸರ ವ್ಯಕ್ತಪಡಿಸಿದರು.
ನಗರದ ರಾಮಾನುಜ ರಸ್ತೆಯಲ್ಲಿರುವ ಮೈಸೂರು ಆರ್ಟ್ ಕಲಾ ಗ್ಯಾಲರಿಯಲ್ಲಿ ಶ್ರೀರಾಜೇಶ್ವರಿ ವಸ್ತ್ರಾಲಂಕಾರ ರಂಗತಂಡ, ಕನ್ನಡ ಸಾಹಿತ್ಯ ಕಲಾಕೂಟ, ಕದಂಬ ರಂಗವೇದಿಕೆ ಹಾಗೂ ಸ್ನೇಹ ಸಿಂಚನ ಟ್ರಸ್ಟ್‌ನಿಂದ ಶನಿವಾರ ಆಯೋಜಿಸಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರದ ಕಲಾಮಂದಿರದಲ್ಲಿ ಸುಚಿತ್ರ ಕಲಾ ಗ್ಯಾಲರಿ ಇದ್ದರೂ ವ್ಯವಸ್ಥಿತ ರೀತಿಯಲ್ಲಿ ಇಲ್ಲ. ಕಲಾವಿದರು ಚಿತ್ರಗಳನ್ನು ಪ್ರದರ್ಶನ ಮಾಡಲು ಸೂಕ್ತ ಬೆಳಕು ಇಲ್ಲದಿರುವುದು, ಚಿತ್ರಗಳನ್ನು ವೀಕ್ಷಿಸುವ ಕಲಾಸಕ್ತರಿಗೆ ಅಲ್ಲಿ ಅಳವಡಿಸಿರುವ ಬೆಳಕು ಚಿತ್ರಗಳ ಮೇಲೆ ಬೀಳದೆ ಕೆಳಗೆ ಬೀಳದಿರುವುದರಿಂದ ಕಲೆಯನ್ನು ಆಸ್ವಾದಿಸಲು ಸಾಧ್ಯವಾಗುವುದಿಲ್ಲ. ಜತೆಗೆ ಇನ್ನಷ್ಟು ವಿಶಾಲವಾದ ಸ್ಥಳದ ಅವಶ್ಯಕತೆ ಇದೆ. ಆದ್ದರಿಂದ ಸರ್ಕಾರ ಕಲೆಗಳ ಪ್ರದರ್ಶನಕ್ಕಾಗಿಯೇ ಕಲಾ ಗ್ಯಾಲರಿ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಮಾತನಾಡಿ, ಎಲೆಮರೆ ಕಾಯಿಯಂತಿರುವ ಕಲಾವಿದರನ್ನು ಗುರುತಿಸುವ ಎಲ್.ಶಿವಲಿಂಗಪ್ಪ ಅವರ ಕಲಾ ಸೇವೆ ಶ್ಲಾಘನೀಯ. ತಮ್ಮ ಮನೆಯ ಒಂದು ಭಾಗವನ್ನೇ ಕಲಾ ಸೇವೆಗೆ ಮುಡಿಪಿಟ್ಟು, ಅದನ್ನು ಉಚಿತವಾಗಿ ನೀಡಿ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ವಿಚಾರವೇ ಸರಿ ಎಂದರು.
ತಿಂಗಳ ಸಾಧಕ ಸನ್ಮಾನ ಸ್ವೀಕರಿಸಿದ ಬಳಿಕ ನಡೆದ ಸಂವಾದ ಕಾಯಕ್ರಮದಲ್ಲಿ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಅನುರಾಗ್ ಬಸವರಾಜ್ ತಾವು ಬೆಳೆದು ಬಂದ ಹಾದಿ, ವೃತ್ತಿ ಬದುಕಿನ ಏರಿಳಿತಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಅನುರಾಗ್ ಬಸವರಾಜ್ ಚಿತ್ರೀಕರಿಸಿ, ಪ್ರಶಸ್ತಿ ಪಡೆದಿರುವ ಹಲವು ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು.
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಹಿರಿಯ ಪತ್ರಿಕಾ ಛಾಯಾಗ್ರಾಹಕ ಪ್ರಗತಿ ಗೋಪಾಲಕೃಷ್ಣ, ವಿಜಯವಾಣಿ ಪತ್ರಿಕೆ ಉಪಸಂಪಾದಕ ದೊಡ್ಡನಹುಂಡಿ ರಾಜಣ್ಣ, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ಮೈಸೂರು ಆರ್ಟ್ ಗ್ಯಾಲರಿ ಕಾರ್ಯದರ್ಶಿ ಡಾ.ಜಮುನಾರಾಣಿ ಮಿರ್ಲೆ, ಸಂಚಾಲಕ ಶ್ರೀಕಂಠಮೂರ್ತಿ ಇತರರು ಇದ್ದರು.