

ಮೈಸೂರು: ಬಿಜೆಪಿಯವರು ಮೋದಿ ಅಲೆ ಎಂದು ಎಲ್ಲ ಕಡೆ ಓಡಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆೆಸ್ ನೇತೃತ್ವದ ಸರ್ಕಾರ ನೀಡಿರುವ ಗ್ಯಾರಂಟಿ ಅಲೆ ಬಿಟ್ಟರೆ ಬೇರೆ ಯಾವ ಅಲೆಯೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಅದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.
ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಕಾಂಗ್ರೆೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಬಳಿಕ ನಗರದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅವರು ಹಳ್ಳಿ, ಊರು, ಗಲ್ಲಿ ಸುತ್ತಾಡಿದರೂ ಕೊನೆಗೆ ಬಿಜೆಪಿ ಗತಿ ಏನಾಯಿತು? ಜನರು ಆಶೀರ್ವಾದ ಮಾಡಿದ್ದರಿಂದ ಕಾಂಗ್ರೆಸ್ 136 ಸ್ಥಾನ ಬಹುಮತ ಪಡೆದು ಸರ್ಕಾರ ರಚನೆ ಮಾಡಿತು ಎಂದರು.
ರಾಜ್ಯದಲ್ಲಿ ಮೋದಿ ಅಲೆ ಇಲ್ಲ ಎನ್ನುವುದನ್ನು ಅರಿತ ಅಮಿತ್ ಷಾ ಅವರು ಬೇರೆಡೆ ರೋಡ್ ಶೋ ಮಾಡುವುದನ್ನು ಬಿಟ್ಟು ಮೈತ್ರಿ ಪಕ್ಷದ ಶಾಸಕರು ಇರುವ ಚನ್ನಪಟ್ಟಣದಲ್ಲಿ ರೋಡ್ ಶೋ ಮಾಡಬೇಕಾಯಿತು ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ 20ಕ್ಕೂ ಅಧಿಕ ಸ್ಥಾನ ಗೆಲ್ಲುವ ನಿರೀಕ್ಷೆೆ ಇಟ್ಟುಕೊಂಡಿದ್ದೇವೆ. ಜನರು, ಬಿಜೆಪಿಯವರು ಮತಯಾಚನೆಗೆ ಬಂದ ಸಂದರ್ಭದಲ್ಲಿ 15 ಲಕ್ಷ ರೂ. ಎಲ್ಲಿ, ಅಚ್ಛೇ ದಿನ್ ಎಲ್ಲಿ, 2 ಕೋಟಿ ಉದ್ಯೋಗ ಎಲ್ಲಿ ಎಂದು ಪ್ರಶ್ನೆೆ ಮಾಡಿ. ಬಿಜೆಪಿಯ ಹಾಲಿ ಸಂಸದರ ಮುಖ ನೋಡಿದರೆ ಜನ ಮತ ಹಾಕುವುದಿಲ್ಲ ಎಂದು ತಿಳಿದುಕೊಂಡು 12 ಸಂಸದರನ್ನು ಬದಲಾಯಿಸಿದ್ದಾರೆ. ದೇಶದಲ್ಲಿ ಬಿಜೆಪಿ 200 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು.