

ಮಂಡ್ಯ: ತಾಲೂಕಿನ ಮಳೆಯಾಶ್ರಿತ ಹೋಬಳಿ ಎನ್ನಿಸಿಕೊಂಡಿರುವ ಬಸರಾಳು ವ್ಯಾಪ್ತಿಯ ಕೆರೆಗಳು ಮಳೆಗಾಲದಲ್ಲಿಯೇ ಬತ್ತಿ ಹೋಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದರೆ, ಅತ್ತ ಶಾಸಕ ರವಿಕುಮಾರ್ ಗಣಿಗ ಅವರ ವಿದೇಶಿ ಪ್ರವಾಸದಲ್ಲಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.
ದೀಪಕ್ಕೆ ಕೆಳಗೆ ಕತ್ತಲು ಎನ್ನುವ ಗಾಧೆ ಮಾತಿನಂತಾಗಿದೆ ಬಸರಾಳು ಹೋಬಳಿ ಪರಿಸ್ಥಿತಿ. ಶಾಸಕರು ಇದೇ ಹೋಬಳಿಯವರೇ ಆಗಿದ್ದರೂ ಕೆರೆಗಳನ್ನು ತುಂಬಿಸಿ ರೈತರಿಗೆ ಅನುಕೂಲ ಮಾಡಲು ಮುಂದಾಗಿಲ್ಲವೆನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ. ಮಂಡ್ಯ ವಿಧಾನಸಭಾ ಕ್ಷೇತ್ರ ಇತರೆ ಹೋಬಳಿ ಹಾಗೂ ಮಂಡ್ಯ ನಗರದ ಬಗ್ಗೆ ತೋರಿಸುವಷ್ಟು ಕಾಳಜಿಯೂ ಬಸರಾಳಿನ ಬಗ್ಗೆ ಇಲ್ಲದಿರುವುದು ಬೇಸರದ ವಿಷಯ.
ನೀರಿಲ್ಲದೆ ಒಣಗುತ್ತಿವೆ ಬೆಳೆ: ಹೋಬಳಿಯಲ್ಲಿ ಹೆಚ್ಚಿನ ರೈತರು ಮಳೆಯನ್ನೇ ನಂಬಿಕೊಂಡು ಕೃಷಿ ಚಟುವಟಿಕೆ ಮಾಡುತ್ತಾರೆ. ಬೋರ್‌ವೆಲ್ ಸೌಲಭ್ಯವಿರುವವರು ಬೇಸಾಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಮೃದ್ಧಿಯಾಗಿ ಮಳೆ ಬಂದರೆ ಹೇಮಾವತಿ ಡ್ಯಾಂ ಸಂಪೂರ್ಣವಾಗಿ ಬರ್ತಿಯಾದರೆ ಮಾತ್ರ ಬಸರಾಳು ಹೋಬಳಿಯ ಕೆರೆಗಳನ್ನು ತುಂಬಿಸಲಾಗುತ್ತದೆ. ಇಲ್ಲವಾದಲ್ಲಿ ಕೆರೆಗಳು ಒಣಗುವ ಪರಿಸ್ಥಿತಿ ಇದೆ.
ಈ ವರ್ಷ ಪರಿಸ್ಥಿತಿ ಭೀಕರವಾಗಿದೆ. ಹೋಬಳಿ ವ್ಯಾಪ್ತಿಯ ಕೆರೆಗಳು ನೀರಿಲ್ಲದೆ ಬಣಗುಡುತ್ತಿವೆ. ಹುಲ್ಲಹಳ್ಳಿಯ, ತೆಂಗಿನಭಾಗ, ಹುಡುಗನಹಳ್ಳಿಯ ಕೆಂಪನಕಟ್ಟೆಯನ್ನು ಶೇ.50ರಷ್ಟು ಮಾತ್ರ ತುಂಬಿಸಲಾಗಿದೆ. ಹಾರಕದಹಳ್ಳಿ ಹಾಗೂ ಕೊಡಗಳ್ಳಿ ಕೆರೆಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿದೆ. ಅಂತೆಯೇ ಬಸರಾಳು ದೊಡ್ಡಕೆರೆ, ಚಿಕ್ಕಕೆರೆ, ಕಂಬದಹಳ್ಳಿ, ಬೆನ್ನಟ್ಟಿ, ಶಾನುಭೋಗನಹಳ್ಳಿ ಸೇರಿದಂತೆ ಹಲವು ಕೆರೆ ಒಣಗುತ್ತಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಮಳೆಗಾಲದಲ್ಲಿಯೇ ಈ ಪರಿಸ್ಥಿತಿಯಾದರೆ ಮುಂದಿನ ಬೇಸಿಗೆ ಕಥೆ ಏನು ಎನ್ನುವ ಪ್ರಶ್ನೆ ಮೂಡುತ್ತಿದೆ. ಆದ್ದರಿಂದ ಹೋಬಳಿ ವ್ಯಾಪ್ತಿ ಕೆರೆ ತುಂಬಿಸುವಂತೆ ರೈತರು ಮನವಿ ಮಾಡುತ್ತಿದ್ದರೂ ಯಾರೊಬ್ಬರೂ ಗಮನಹರಿಸದಿರುವುದು ಬೇಸರ ತರಿಸಿದೆ. ನೀರಿಲ್ಲದೆ ಕೃಷಿ ಮಾಡಲು ಸಾಧ್ಯವಾಗದ ಪರಿಣಾಮ ಬದುಕು ಕಟ್ಟಿಕೊಳ್ಳಲು ಪಟ್ಟಣದತ್ತ ವಲಸೆ ಹೋಗುತ್ತಿದ್ದಾರೆ.
ಚುನಾವಣೆಗಷ್ಟೇ ಬಸರಾಳಿನ ನೆನಪು: ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ಬಸರಾಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಚುನಾವಣೆ ನಂತರ ಈ ಹೋಬಳಿಯನ್ನು ನಿರ್ಲಕ್ಷ್ಯ ಮಾಡಿದವರೇ ಹೆಚ್ಚು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಈಗಲೂ ಹೋಗುತ್ತಿದೆ. ಚುನಾವಣೆ ಸಮಯದಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸಿ ಬಳಿಕ ನಿರ್ಲಕ್ಷೃ ಮಾಡಲಾಗುತ್ತಿದೆ.
ಇನ್ನು ಈ ವರ್ಷದ ವಿಷಯವನ್ನು ಪ್ರಸ್ತಾಪಿಸುವುದಾದರೆ ಕೃಷಿಗಂತೂ ನೀರು ಸಿಗುವುದು ಅನುಮಾನವಾಗಿದೆ. ಆದರೆ ಜನ, ಜಾನುವಾರುಗಳಿಗೆ ಕುಡಿಯಲು ತತ್ವಾರ ಎದುರಾಗುವ ಆತಂಕವಿದೆ. ಮೊದಲ ಮಳೆಯಾಶ್ರಿತ ಪ್ರದೇಶವಾಗಿರುವುದರಿಂದ ಕೆರೆ ಕಟ್ಟೆ ಖಾಲಿಯಾಗಿದ್ದು, ಬೋರ್‌ವೆಲ್‌ಗಳ ಅಂರ್ತಜಲವೂ ಕುಸಿಯುತ್ತಿದೆ.
ಬಸರಾಳಿಗೆ ಸಿಗದ ಗ್ಯಾರಂಟಿ: ಗ್ಯಾರಂಟಿ ಸರ್ಕಾರದ ಶಾಸಕರಾಗಿರುವ ರವಿಕುಮಾರ್ ಗಣಿಗ, ಈ ಬಾರಿ ಬೆಳೆಗೆ ನೀರು ಕೊಡುವುದು ಖಚಿತ. ಅಂತೆಯೇ ಬಸರಾಳು ಹೋಬಳಿ ವ್ಯಾಪ್ತಿಯ ಕೆರೆಗಳನ್ನು ತುಂಬಿಸುವುದು ನಿಶ್ಚಿತವೆಂದು ಹೇಳಿದರು. ಆದರೆ ಅಂತಹ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಮಾತ್ರವಲ್ಲದೆ ಮಂಡ್ಯದಲ್ಲಿ ಕಾವೇರಿ ಹೋರಾಟ ಹಾಗೂ ನೀರು ಸಿಗಲಿದೆಯೇ ಆತಂಕದಲ್ಲಿ ರೈತರಿದ್ದಾರೆ. ಈ ನಡುವೆ ಶಾಸಕರು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಬಹರೇನ್ ದೇಶದ ಪ್ರವಾಸದಲ್ಲಿದ್ದಾರೆ. ಅಲ್ಲಿನ ಕನ್ನಡ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ಮಾತ್ರವಲ್ಲದೆ ಮಳವಳ್ಳಿ ಕ್ಷೇತ್ರದಲ್ಲಿಯೂ ಕೆರೆಗಳು ಖಾಲಿಯಾಗಿರುವ ಬಗ್ಗೆ ಇತ್ತೀಚೆಗೆ ಬರ ಸಂಬಂಧಿಸಿದ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಬಳಿಕ ಕೆರೆಗೆ ನೀರು ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ನಾಗಮಂಗಲ ಹಾಗೂ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಭಾಗದ ಕೆರೆಗಳನ್ನು ನೀರು ತುಂಬಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಇತ್ತ ಮಂಡ್ಯ ಶಾಸಕರು ಗಮನಹರಿಸದಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ಹೋಬಳಿಯಲ್ಲಿ ಬಿತ್ತನೆ ಎಷ್ಟೆಷ್ಟು?: ಬಸರಾಳು ಹೋಬಳಿಯಲ್ಲಿ ಭತ್ತ 975 ಹೆಕ್ಟೇರ್, ಜೋಳ 2 ಹೆಕ್ಟೇರ್, ರಾಗಿ 2,558 ಹೆಕ್ಟೇರ್, ಮುಸುಕಿನ ಜೋಳ 14 ಹೆಕ್ಟೇರ್ ಸೇರಿದಂತೆ 3,550 ಹೆಕ್ಟೇರ್‌ನಲ್ಲಿ ಏಕದಳ, ಹುರುಳಿ 400 ಹೆಕ್ಟೇರ್, ಅಲಸಂದೆ 39 ಹಾಗೂ ಅವರೆ 20 ಹೆಕ್ಟೇರ್, ಎಳ್ಳು 87 ಹೆಕ್ಟೇರ್, ಕಬ್ಬು(ತನಿ) 328 ಹಾಗೂ ಕಬ್ಬು(ಕೂಳೆ) 580 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.