ಹಬ್ಬಗಳ ಆಡಂಬರದ ಆಚರಣೆಗೆ ಮೌಲ್ಯವಿಲ್ಲ

Oplus_16908288
ಸದ್ಬಾವನಾ ಮಂಚ್‌ನ ಸೌಹಾರ್ದ ಸಂಗಮ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜಿ, ಮದಲೈ ಮುತ್ತು, ಪೂನ್ನಣ್ಣ, ದೇಚಮ್ಮ, ಕಾರ್ಯಪ್ಪ ಇದ್ದರು.
Published on

ವಿರಾಜಪೇಟೆ: ದೇಶದಲ್ಲಿ ವಿವಿಧ ಧರ್ಮಗಳು ನೆಲೆ ಕಂಡಿದ್ದರೂ ಹಬ್ಬಗಳ ಆಚರಣೆಗೆ ಕೊರತೆ ಇಲ್ಲ. ಧರ್ಮದ ಮೂಲ ತತ್ವ ಅರಿಯದೆ ಹಬ್ಬಗಳ ಆಡಂಬರದ ಆಚರಣೆಗೆ ಮೌಲ್ಯವಿಲ್ಲ ಎಂದು ಅರಮೇರಿ ಕಳಂಚೇರಿ ಮಠ ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸದ್ಬಾವನಾ ಮಂಚ್ ವಿರಾಜಪೇಟೆ ವತಿಯಿಂದ ನಗರದ ಸಂತ ಅನ್ನಮ್ಮ ಚರ್ಚ್ ಸಭಾಂಗಣದಲ್ಲಿ ಧಾರ್ಮಿಕ ಸಹಬಾಳ್ವೆ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಠಾಧೀಶರು ದೇಶದಲ್ಲಿ ಆಚರಿಸುವ ಕೆಲವೊಂದು ಹಬ್ಬಗಳು ಪ್ರಕೃತಿಗೆ ಪೂರಕವಾಗಿದೆ. ಪ್ರಕೃತಿಯನ್ನು ಗುರುವೆಂದು ಭಾವಿಸಿದ್ದರು. ನಮ್ಮ ಪೂರ್ವಜರು. ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಧರ್ಮದ ಮೂಲ ತತ್ವವನ್ನು ಬದಿಗಿಟ್ಟು ಹಬ್ಬ ಹರಿದಿನಗಳನ್ನು ಆಚರಿಸುವುದಕ್ಕೆ ಮೌಲ್ಯವಿಲ್ಲ. ಪ್ರಸ್ತುತ ದಿನಗಳಲ್ಲಿ ಆಚರಿಸುವ ಹಬ್ಬಗಳು ವೈಭವೀಕರಣವಾಗಿರುವುದು ಧರ್ಮದ ಭಾವಗಳು, ಮೌಲ್ಯಗಳಿಗೆ ವಿರುದ್ಧ್ದವಾಗಿದೆ. ಹಬ್ಬಗಳ ಆಚರಣೆಗಳು ನೇರವಾಗಿ ದೇವರಲ್ಲಿ ಐಕ್ಯವಾಗುವಂತಿರಬೇಕು, ತೃಪ್ತಿ ದಾಯಕವಾಗಿರಬೇಕು. ಆಡಂಬರ, ಪ್ರದರ್ಶನಕ್ಕೆ ಪೂರಕವಾಗಿ ಆಚರಣೆಗಳಾಗಬಾರದು. ಜಾಗೃತ ಸಮಾಜಕ್ಕೆ ಧರ್ಮಗಳ ಆಚರಣೆಗಳ ತತ್ವ ಸಂದೇಶಗಳು ಮನಮುಟ್ಟುವಂತಾಗಬೇಕು ಎಂದು ಆಶಿಸಿದರು.

ಜಮಾಯತೆ ಇಸ್ಲಾಮೀ ಹಿಂದ್‌ನ ಸಹ ಕಾರ್ಯದರ್ಶಿ ರಿಯಾಜ್ ಅಹಮದ್ ಮಾತನಾಡಿ, ಹಬ್ಬಗಳ ಆಚರಣೆಗಳು ಸಮಾಜದ ಒಂದು ಭಾಗವಾಗಿದೆ. ಧರ್ಮಗಳ ತತ್ವ ಸಂದೇಶಗಳ ಕುರಿತು ಸಭೆ ಸಮಾರಂಭಗಳಲ್ಲಿ ಆರೋಗ್ಯ ಪೂರ್ಣ ಚರ್ಚೆಗಳು ನಡೆಯಬೇಕು. ಧರ್ಮಗಳ ಮಧ್ಯೆ ಇರುವ ಒಡಕು ಹೋಗಲಾಡಿಸುವ ಪ್ರಯತ್ನವಾಗಬೇಕು. ಮೌಲ್ಯಗಳ ಉಳಿವಿಗಾಗಿ ಶ್ರಮ ವಹಿಸುವವನು ಅಪ್ಪಟ ದೇಶಭಕ್ತ. ಜಗತ್ತಿನ ಒಳಿತನ್ನು ಬಯಸುವವನು ಸರ್ವೋತ್ತಮನು ಎಂದು ಕರೆಸಿಕೊಳ್ಳುತ್ತಾನೆ. ಭಾತೃತ್ವ, ಪ್ರೀತಿ, ಶಾಂತಿ ಎನ್ನುವುದು ಪ್ರಾಚೀನ ಸಂಸ್ಕೃತಿಯ ಪ್ರತೀಕವಾಗಿ ಇವುಗಳನ್ನು ಎಂದಿಗೂ ಜೀವಂತವಾಗಿರುತ್ತದೆ. ಅಂಧಕಾರ, ಭ್ರಷ್ಟಾಚಾರ, ಅಸಹಿಷ್ಣುತೆಗಳ ವಿರುದ್ಧ ಹೋರಾಟ ಮಾಡುವ ಗುಣಗಳನ್ನು ಸಮಾಜದ ಪ್ರತಿಯೊಬ್ಬರೂ ರೂಢಿಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಆಗುತ್ತದೆ. ದ್ವೇಷ ಸಾಧನೆಯಿಂದ ಯಾವುದನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲ. ಪ್ರೀತಿ ಶಾಂತಿಯಿಂದ ಮಾತ್ರ ನಮಗೆ ಬೇಕಾಗಿರುವುದನ್ನು ಪಡೆದುಕೊಳ್ಳಲು ಸಹಕಾರವಾಗುತ್ತದೆ ಎಂದು ಹೇಳಿದರು.

ಸಂತ ಅನ್ನಮ್ಮ ವಿದ್ಯಾ ಸಂಸ್ಥೆಗಳ ಮುಖ್ಯ ವ್ಯವಸ್ಥಾಪಕರು ರೆ.ಫಾ. ಮದಲೈ ಮುತ್ತು ಮಾತನಾಡಿ, ಹಬ್ಬಗಳ ಆಚರಣೆಗಳು ಆಡಂಬರದ ಪ್ರದರ್ಶನಕ್ಕೆ ಸೀಮಿತವಾಗಬಾರದು. ಬದಲಿಗೆ ದೇವರಲ್ಲಿ ಲೀನವಾಗುವಂತಹ ಭಕ್ತಿ ಪ್ರಧಾನವಾಗಿರಬೇಕು ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಪ್ರೊ.ಪಟ್ಟಡ ಪೂವಣ್ಣ, ವಿರಾಜಪೇಟೆ ಪುರಸಭೆಯ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಸಿ.ಕೆ.ಪೂವಣ್ಣ ಮಾತನಾಡಿದರು. ಸದ್ಭಾವನಾ ಮಂಚ್ ವಿರಾಜಪೇಟೆ ಅಧ್ಯಕ್ಷ ಡಾ.ಎಂ.ಸಿ.ಕಾರ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಕೊಡವ ಸಮಾಜದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ, ಉದ್ಯಮಿಗಳಾದ ರಶೀದ್ ಕೆ.ಪಿ. ಚೋಪಿ ಜೋಸೆಫ್, ಕೆ.ಪಿ.ಮೊಹಮ್ಮದ್, ಪುಷ್ಪರಾಜ್ ಜೈನ್, ಅಬ್ದುಲ್ ರಹಮಾನ್, ಅಬ್ದುಲ್ಲಾ, ನೀಕ್ಷೆಪ್‌ಜೈನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net