ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ, ಖಾಲಿ ಆಗುವುದೂ ಇಲ್ಲ : ಸಚಿವ ಡಾ.ಎಚ್.ಸಿ. ಮಹದೇವಪ್ಪ

Mahadevappa
Published on

ಮೈಸೂರು: ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಖಾಲಿ ಆಗುವುದೂ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೀವು (ಮಾಧ್ಯಮ) ನೋಡಿದ ಹಾಗೆ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇದೆಯಾ? ಇಲ್ಲ ಅನ್ನುವುದಾದರೆ ಆ ವಿಚಾರದ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟುಬಿಡಿ ಎಂದು ಹೇಳಿದರು.

ನಾಡಹಬ್ಬ ದಸರಾ ಉತ್ಸವಕ್ಕೆ ಉದ್ಘಾಟಕರಾಗಿ ಯಾರನ್ನು ಆಹ್ವಾನಿಸಬೇಕು ಎಂಬ ಕುರಿತು ಇನ್ನೂ ತೀರ್ಮಾನವಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ಬಾರಿ ನಾಡಹಬ್ಬ ದಸರಾ ಉತ್ಸವ ಅಚ್ಚುಕಟ್ಟಾಗಿ, ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಒಟ್ಟು 19 ಉಪ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲ ಸಮಿತಿಗಳಿಗೆ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದರು.

ಗೋಲ್ಡ್ ಪಾಸ್‌ನಲ್ಲಿ ಈ ಬಾರಿ ಯಾವುದೇ ರೀತಿಯ ಗೊಂದಲ ಆಗಬಾರದು ಎಂದು ನಿರ್ದೇಶನ ನೀಡಲಾಗಿದೆ. ಪಾಸ್ ಪಡೆದುಕೊಂಡವರಿಗೆ ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು ಅವಕಾಶ ದೊರೆಯದೆ ಇರುವ ಕುರಿತು ದೂರುಗಳು ಕೇಳಿ ಬಂದಿದ್ದು, ಈ ಬಾರಿ ಅಂತಹ ತಪ್ಪುಗಳು ಆಗಬಾರದು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ದಸರಾ ಸಂದರ್ಭ ಇದುವರೆಗೆ ಸೂರ್ಯೋದಯದಿಂದ ಸೂರ್ಯಾಸ್ತಮದವರೆಗೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಂದು ದಿನ ಆಯೋಜಿಸಲಾಗುತಿತ್ತು. ಇದನ್ನು ಕೈ ಬಿಟ್ಟು ಈ ಬಾರಿ ಪ್ರತಿ ದಿನ ಸಂಜೆ 4 ರಿಂದ 10ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸಂಜೆ 4 ರಿಂದ 7ರವರೆಗೆ ಸ್ಥಳೀಯ ಕಲಾವಿದರಿಗೆ ಕಾರ್ಯಕ್ರಮ ನೀಡಲು ಅವಕಾಶ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net