ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ: ಈಶ್ವರ ಖಂಡ್ರೆ ಸ್ಪಷ್ಟನೆ

Eshwara khandre
Published on

ಶಿವಮೊಗ್ಗ: ಮೂರು ಎಕರೆ ಒಳಗಿನ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು. 2015ಕ್ಕೂ ಪೂರ್ವದಲ್ಲಿ ಬಗರ್‌ಹುಕುಂ, ಅರಣ್ಯಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದವರ ಪ್ರಕರಣಗಳ ಬಗ್ಗೆ ಇನ್ನೂ ಕೋರ್ಟ್ ತೀರ್ಪು ಬಂದಿಲ್ಲ. ಹೀಗಾಗಿ ಅವರನ್ನು ಈಗ ಒಕ್ಕಲಿಬ್ಬಿಸುವ ಪ್ರಶ್ನೆಯೇ ಇಲ್ಲ. ಇದನ್ನು ನಮ್ಮ ಅಧಿಕಾರಿಗಳಿಗೂ ತಿಳಿಸಿದ್ದೇನೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

ಶಂಕರಘಟ್ಟ ಕುವೆಂಪು ವಿವಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಭದ್ರಾ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಅಂತಿಮ ಆದೇಶ ಬಂದ ಕೆಲವು ಪ್ರಕರಣಗಳಲ್ಲಿ ಮಾತ್ರ ಒತ್ತುವರಿ ತೆರವು ಮಾಡಲಾಗುತ್ತಿದೆ. 2015ರ ಬಳಿಕವೂ ವ್ಯಾಪಕ ಒತ್ತುವರಿಯಾಗುತ್ತಿದೆ. ಇದನ್ನು ಉಪಗ್ರಹ ಆಧಾರಿತ ಚಿತ್ರಗಳೇ ವಿವರಿಸುತ್ತಿವೆ. ಇಂತಹ ಪ್ರಕರಣಗಳಲ್ಲಿ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ ಎಂದು ಹೇಳಿದರು.
ಅರಣ್ಯ ಹಾಗೂ ಪರಿಸರದ ಬಗ್ಗೆ ಆಸಕ್ತಿ ಇರುವವರಿಗೆ ಅರಣ್ಯದೊಳಕ್ಕೆ ಹೋಗಲು ಯಾವುದೇ ನಿರ್ಬಂಧವಿಲ್ಲ. ಆದರೆ ಶೀಘ್ರ ವೈಲ್ಡ್ ಲೈಫ್ ವಾರ್ಡನ್‌ಗಳನ್ನು ನೇಮಕ ಮಾಡಲಾಗುವುದು. ಜೀವನ ಹಾಗೂ ಜೀವನೋಪಾಯ ಎರಡೂ ನಡೆಯಬೇಕು. ಸುಸ್ಥಿರ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಸರ್ಕಾರದ ಆಶಯ. ಈ ಭಾಗದ ಅರಣ್ಯ ಸಮಸ್ಯೆಗಳ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net