ಯಾವುದೇ ಪ್ರಕ್ಷುಬ್ಧ ವಾತಾವರಣ ಇಲ್ಲ

Published on

ಕೊಳ್ಳೇಗಾಲ: ಪಟ್ಟಣದ ಲಿಂಗಣಾಪುರ ಬಡಾವಣೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ವೀರಶೈವ ಲಿಂಗಾಯತ ಸಮುದಾಯ ಅನ್ಯೋನ್ಯವಾಗಿದ್ದು, ಯಾವುದೇ ರೀತಿ ಪ್ರಕ್ಷುಬ್ಧ ವಾತಾವರಣ ಇಲ್ಲ ಎಂದು ಬಡಾವಣೆ ವೀರಶೈವ ಲಿಂಗಾಯತ ಸಮಾಜದ ಮುಖಂಡ ಬಸವರಾಜಪ್ಪ ಹೇಳಿದರು.

ಬಡಾವಣೆಯ ಸರ್ಕಾರಿ ರಸ್ತೆಯಲ್ಲಿ ಗ್ರಂಥಾಲಯ ಉದ್ದೇಶಕ್ಕೆ ನಿರ್ಮಿಸಿರುವ ಕಟ್ಟಡವೊಂದರ ವಿಚಾರವಾಗಿ ಏರ್ಪಟ್ಟಿರುವ ವಿವಾದಕ್ಕೆ ಸಂಬಂಧಿಸಿದಂತೆ ಬಡಾವಣೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸರ್ಕಾರಿ ರಸ್ತೆಗೆ ಸೇರಿದ ಜಾಗದಲ್ಲಿ ಗ್ರಂಥಾಲಯ ನಿರ್ಮಿಸಲು ಹಾಕಿರುವ ಅಡಿಪಾಯ ಪಕ್ಕದಲ್ಲಿ ದೇವಾಲಯ ಇದೆ. ಶಾಸಕ ಬಿ.ಬಸವಯ್ಯ ಅವರ ಕಾಲದಲ್ಲಿ ಕಟ್ಟಿದ್ದ ಓವರ್ ಹೆಡ್‌ಟ್ಯಾಂಕ್ ಇದೆ. ಗ್ರಂಥಾಲಯ ಉದ್ದೇಶಕ್ಕೆ ಪರಿಶಿಷ್ಟ ಜಾತಿ ಜನರು ಕಟ್ಟಿದ್ದಾರೆ. ಇದಕ್ಕೆ ಕಟ್ಟಡ ಪಕ್ಕದಲ್ಲಿರುವ ಖಾಸಗಿ ವ್ಯಕ್ತಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದಕ್ಕೂ ವೀರಶೈವ ಲಿಂಗಾಯತ ಸಮುದಾಯಕ್ಕೂ ಸಂಬಂಧವಿಲ್ಲ. ಗ್ರಂಥಾಲಯ ಸಾರ್ವಜನಿಕರ ಉಪಯೋಗಕ್ಕೆ ಮಾಡಿರುವುದರಿಂದ ಅದಕ್ಕೆ ನಮ್ಮ ಬೆಂಬಲವಿದೆ. ಆದರೆ, ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನರು ಹಾಗೂ ಸವರ್ಣೀಯರ ನಡುವೆ ಪ್ರಕ್ಷುಬ್ಧ ವಾತಾವರಣವಿದೆ ಎಂಬ ಸುಳ್ಳು, ವಂದತಿಯನ್ನು ಹಬ್ಬಿಸಲಾಗಿದೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು.

ತಾಲೂಕು ಆಡಳಿತ ಅಧಿಕಾರಿಗಳು ಗ್ರಂಥಾಲಯ ಕಟ್ಟಡ ತೆರವಿಗೆ ಬಂದಿದ್ದರು. ಅವರೂ ಗ್ರಾಮದ ಮುಖಂಡರ ಜತೆ ಈ ಬಗ್ಗೆ ಚರ್ಚಿಸಿಲ್ಲ. ಸರ್ಕಾರಿ ಸ್ಥಳದಲ್ಲಿ ಗ್ರಂಥಾಲಯ ಕಟ್ಟುವುದು ಅಕ್ರಮ ಎಂದರೆ ರಸ್ತೆಯನ್ನೇ ಆಕ್ರಮಿಸಿಕೊಂಡು ಎಷ್ಟು ಜನರು ಮನೆ ಕಟ್ಟಿದ್ದಾರೆ. ನಾವು ತೋರಿಸುತ್ತೇವೆ, ಅವುಗಳನ್ನು ತೆರವು ಮಾಡಲಿ ಎಂದು ಹೇಳಿದರು.

ಬಡಾವಣೆ ಗೌಡರಾದ ಅನಿಲ್‌ಕುಮಾರ್ ಮಾತನಾಡಿ, ಗ್ರಂಥಾಲಯ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಇಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.

ಲಿಂಗಣಾಪುರದ ಪರಿಶಿಷ್ಟ ಜಾತಿ ಜನಾಂಗದ ಯಜಮಾನ ಸಿದ್ದರಾಜು ಮಾತನಾಡಿ, ಗ್ರಂಥಾಲಯ ಕಟ್ಟುತ್ತಿರುವ ಜಾಗ ಬಸಮಣಿ ಅವರದ್ದೇ ಆದರೆ, ಅವರೇ ಪಡೆದುಕೊಳ್ಳಲಿ. ಅದು ಸರ್ಕಾರಿ ರಸ್ತೆಯಾಗಿದೆ. ಗ್ರಂಥಾಲಯ ನಿರ್ಮಾಣ ಮಾಡಿಕೊಡಿ ಎಂದು ನಾವು ನಗರಸಭೆ ಆಯಕ್ತರಿಗೆ ಪತ್ರದ ಮೂಲಕ ಮನವಿ ಮಾಡಿದ್ದೇವೆ. ಅಧಿಕಾರಿಗಳು ಜಾಗದ ಸರ್ವೇ ಮಾಡಲಿ ಎಂದು ಒತ್ತಾಯಿಸಿದರು.

ಲಿಂಗಾಣಪುರ ಗ್ರಾಮದಲ್ಲಿ ಎಲ್ಲ ಜನರು ಪರಸ್ಪರ ಸೌಹಾರ್ದತೆಯಿಂದ ಬಾಳುತ್ತಿದ್ದೇವೆ. ಯಾವುದೇ ರೀತಿಯ ಗಲಭೆಗೆ ಆಗುವ ಸನ್ನಿವೇಶವಿಲ್ಲ. ಗ್ರಂಥಾಲಯ ನಿರ್ಮಾಣಕ್ಕೆ ಶಾಸಕರು ಹಾಗೂ ಅಧಿಕಾರಿಗಳು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ವೀರಶೈವ ಲಿಂಗಾಯತ ಸಮುದಾಯದ ಲಿಂಗಣಾಪುರದ ಗೌಡರಾದ ಶಿವಪ್ಪ, ಅನಿಲ್ ಕುಮಾರ್, ಮುಖಂಡ ಪ್ರಸಾದ, ದಲಿತ ಸಮುದಾಯದ ಯಜಮಾನರಾದ ಸಿದ್ದರಾಜು, ಸಿದ್ದಮರಿ, ಮಹದೇವಸ್ವಾಮಿ, ಮಲ್ಲಿಕಾರ್ಜುನ, ನಂಜಯ್ಯ ಮುಖಂಡರಾದ ಸೋಮಣ್ಣ, ಶಿವಮಲ್ಲು, ಮುದ್ದಣ್ಣ, ನಗರಸಭೆ ಸದಸ್ಯರಾದ ಜಯರಾಜ್, ರಾಮಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net