

ಮೈಸೂರು: ಗುತ್ತಿಗೆದಾರ ಕೆಂಪಣ್ಣ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಕಮಿಷನ್ ಆರೋಪ ಮಾಡಿರುವ ಕುರಿತು ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ, ಕೆಂಪಣ್ಣ ಮಾಡಿರುವ ಆರೋಪದಲ್ಲಿ ಯಾವುದೇ ಅಸತ್ಯ ಇಲ್ಲ, ಹಿಂದಿನ ಕಮಿಷನ್ ಈ ಸರ್ಕಾರದಲ್ಲೂ ಮುಂದುವರಿದಿದೆ ಎಂದರು.
ಮೈಸೂರು ದಸರೆಯ 20 ಕೋಟಿ ಅನುದಾನ ಹಾಗೂ ದಸರಾ ಕಾಮಗಾರಿ ಅನುದಾನದಲ್ಲೂ 20 ಪರ್ಸೆಂಟ್ ಕಮಿಷನ್ ಕೇಳಲಾಗಿದೆ. ಕಮಿಷನ್ ಕೊಡದ ಕಾರಣ ಬೆಂಗಳೂರು ಮೂಲದವರಿಗೆ ಗುತ್ತಿಗೆ ನೀಡಲಾಗಿದೆ. ಈ ಬಗ್ಗೆ ವಿದ್ಯುತ್ ಗುತ್ತಿಗೆದಾರರು ನನಗೆ ಮನವಿ ಪತ್ರ ನೀಡಿದ್ದು, ಸದನದಲ್ಲಿ ಈ ವಿಚಾರ ಚರ್ಚಿಸುತ್ತೇನೆ ಎಂದ ಕುಮಾರಸ್ವಾಮಿ, ಆರೋಪ ಸಾಬೀತಾದರೆ ರಾಜೀನಾಮೆ ನೀಡುವುದಾಗಿ ಹೇಳಿರುವ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ಅವರು ಏನು ರಾಜೀನಾಮೆ ಕೊಡುತ್ತಾರಂತೆ? ಇಂತಹ ಕಮಿಷನ್ ಹಣದ ವ್ಯವಹಾರಕ್ಕೆ ಸಾಕ್ಷಿ ಕೊಡಲು ಆಗುತ್ತಾ? ಹಿಂದೆ ಬಿಜೆಪಿ ವಿರುದ್ಧದ 40 ಪರ್ಸೆಂಟ್ ಆರೋಪಕ್ಕೆ ಇವರು ಸಾಕ್ಷಿ ನೀಡಿದ್ದರಾ? ಸುಖಾ ಸುಮ್ಮನೆ ಆರೋಪ ಮಾಡುತ್ತಲೇ ಬಂದರು ಎಂದು ಕಿಡಿಕಾರಿದರು.