

ಚಿತ್ರದುರ್ಗ: ಕವಾಡಿಗರಹಟ್ಟಿಯ ದಲಿತ ಕಾಲನಿಯ ಪ್ರಕರಣದ ಎರಡನೇ ಎಫ್‌ಎಸ್‌ಎಲ್ ವರದಿ ಶನಿವಾರ ಜಿಲ್ಲಾಡಳಿತ ಕೈಸೇರಿದ್ದು, ನೀರಿನೊಳಗೆ ವಿಷ ಬೆರೆತಿಲ್ಲ ಎಂದು ವರದಿ ದೃಢೀಕರಿಸಿದೆ.
ಮೊದಲ ವರದಿಯಲ್ಲಿ ಮೃತ ಮಂಜುಳಾ, ಪ್ರವೀಣ್ ದೇಹದೊಳಗೆ ವಿಷ ಬೆರೆತಿಲ್ಲವೆಂದು ವರದಿ ನೀಡಿತ್ತು. ಈಗ ಪಾರ್ವತಮ್ಮ, ತಿಪ್ಪೇರುದ್ರಪ್ಪ ಅವರ ದೇಹದಲ್ಲೂ ವಿಷದ ಅಂಶಗಳಿಲ್ಲ ಎಂದು ಎಫ್‌ಎಸ್‌ಎಲ್ ವರದಿ ನೀಡಿದೆ. ರಘು ಬೆಂಗಳೂರಿನಲ್ಲಿ ಮೃತಪಟ್ಟ ಕಾರಣ ಅಲ್ಲಿಯ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಮೃತ ಮಂಜುಳಾ ಸೇರಿ ಇಬ್ಬರ ಮರಣೋತ್ತರ ಪರೀಕ್ಷೆ ವರದಿಯೂ ಜಿಲ್ಲಾಡಳಿತದ ಕೈಸೇರಿದ್ದು, ವಾಂತಿ-ಭೇದಿ ಕಾರಣಕ್ಕೆ ಗಾಬರಿಗೊಂಡು ದೇಹದೊಳಗೆ ನಿರ್ಜಲೀಕರಣ ಹೆಚ್ಚಾಗಿ, ಲೋ ಬಿಪಿಯಾಗಿ ಸಾವು ಸಂಭವಿಸಿದೆ ಎಂದು ಪರೀಕ್ಷೆ ನಡೆಸಿದ ತಜ್ಞ ವೈದ್ಯರು ದೃಢೀಕರಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಾಪ್ರಭು ಮಾಹಿತಿ ನೀಡಿದ್ದಾರೆ.