

ಕೇಶವಮೂರ್ತಿ ವಿ.ಬಿ. ಹಾವೇರಿ
ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಟೋಲ್ಗಳಲ್ಲಿ ಕಬ್ಬುಸಹಿತ ವಾಹನಗಳಿಗೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿ ನವೆಂಬರ್ 15ರಂದು ಆದೇಶ ಹೊರಡಿಸಿದ್ದರೂ ಟೋಲ್ನವರು ಈ ಆದೇಶವನ್ನು ಸರಿಯಾಗಿ ಪಾಲಿಸದ ಕಾರಣ ಬೆಳೆಗಾರರ ಜೇಬಿಗೆ ಆರ್ಥಿಕ ಹೊರೆಯಾಗುತ್ತಿದೆ.
ಜಿಲ್ಲೆಯಲ್ಲಿ ಬೆಳೆದ ಕಬ್ಬನ್ನು ರೈತರು ಕಟಾವಿನ ನಂತರ ಜಿಲ್ಲೆ ಹಾಗೂ ಇತರ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವ ವಾಹನಗಳಿಗೆ ಅಧಿಕ ತೂಕದ ನೆಪದಲ್ಲಿ ಟೋಲ್ ಗೇಟ್ಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ರೈತರ ಹಿತದೃಷ್ಟಿಯಿಂದ ಶುಲ್ಕ ವಸೂಲಿಯನ್ನು ನಿಲ್ಲಿಸಿ, ಕಬ್ಬು ಸಾಗಣೆ ವಾಹನಗಳಿಗೆ ವಿನಾಯಿತಿ ನೀಡುವಂತೆ ಜಿಲ್ಲೆಯ ರೈತರು ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ಪಂದಿಸಿದ ಡಿಸಿ ವಿನಾಯಿತಿ ನೀಡುವಂತೆ ಶುಲ್ಕ ಸಂಗ್ರಹಕಾರರಿಗೆ ಆದೇಶಿಸಿದ್ದರು.
ಜಿಲ್ಲೆಯ ರಾಣೆಬೆನ್ನೂರ ತಾಲೂಕು ಚಳಗೇರಿ ಹಾಗೂ ಶಿಗ್ಗಾಂವಿ ತಾಲೂಕು ಬಂಕಾಪುರದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಟೋಲ್ಗಳು ಇವೆ. ರಾಜ್ಯ ಹೆದ್ದಾರಿಗಳಲ್ಲಿ ಟೋಲ್ಗೇಟ್ಗಳು ಇಲ್ಲ. ಚಳಗೇರಿ ಹಾಗೂ ಬಂಕಾಪುರ ಟೋಲ್ಗಳಲ್ಲಿ ಈ ಆದೇಶ ಪಾಲನೆಯಾಗುತ್ತಿಲ್ಲ. ಒಂದು ಲಾರಿಯಿಂದ ಅಂದಾಜು 530 ರೂ. ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಇದು ರೈತರಿಗೆ ಹೊರೆಯಾಗಿ ಪರಿಣಮಿಸಿದೆ.
ರೈತರ ಮನವಿ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಕರ್ನಾಟಕ ಪೊಲೀಸ್ ಕಾಯ್ದೆ- 1963ರ ಕಲಂ (31)ರ ಅನ್ವಯ ತಮ್ಮ ಅಧಿಕಾರದ ಮೇಲೆ ಜಿಲ್ಲೆಯಲ್ಲಿ ಬೆಳೆದ ಕಬ್ಬನ್ನು ಇತರ ಜಿಲ್ಲೆಗೆ ಸಾಗಿಸುತ್ತಿರುವ ವಾಹನಗಳಿಗೆ ಹಾಗೂ ಇತರ ಜಿಲ್ಲೆಯಿಂದ ಬರುವ ಕಬ್ಬುಸಹಿತ ವಾಹನಗಳಿಗೆ ಟೋಲ್ ಶುಲ್ಕ ವಿನಾಯಿತಿ ನೀಡುವಂತೆ ರಾಜ್ಯ ಹಾಗೂ ರಾಷ್ಟ್ರೀಯ ಟೋಲ್ಗಳಿಗೆ ಸೂಚಿಸಿ ನವೆಂಬರ್ 15ರಂದೇ ಆದೇಶ ಹೊರಡಿಸಿದ್ದರು.
ಜಿಲ್ಲೆಯಲ್ಲಿ ಬಹುತೇಕ ಮಹಾರಾಷ್ಟ್ರದದಿಂದ ಬಂದಿರುವ ಕಬ್ಬು ಕಟಾವು ತಂಡಗಳು ಇವೆ. ಈ ತಂಡಗಳ ಬಳಿ ಟ್ರ್ಯಾಕ್ಟರ್ ಹಾಗೂ ಲಾರಿಗಳು ಇವೆ. ಟ್ರ್ಯಾಕ್ಟರ್ಗಳಿಗೆ ಮೊದಲಿನಿಂದಲೂ ಉಚಿತ ಪ್ರಯಾಣವಿದೆ. ಹೊರ ಜಿಲ್ಲೆಗಳ ಲಾರಿಗಳಿಗೆ ಅಂದಾಜು 11 ಸಾವಿರ ರೂ.ಗೆ ತಿಂಗಳ ಪಾಸ್ ಕೊಡಲಾಗುತ್ತಿದೆ. 2 ಎಕ್ಸೆಲ್, 3 ಎಕ್ಸೆಲ್ಗೆ ಬೇರೆ ಬೇರೆ ದರ ನಿಗದಿ ಮಾಡಲಾಗಿದೆ ಎನ್ನುತ್ತಾರೆ ಟೋಲ್ ಸಿಬ್ಬಂದಿ.
ಒಂದು ವರ್ಷ ಅನಾವೃಷ್ಟಿ, ಮತ್ತೊಂದು ವರ್ಷ ಅತಿವೃಷ್ಟಿಯಿಂದ ಬಳಲುತ್ತಿರುವ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ದುಸ್ಥಿತಿಯಲ್ಲೂ ಸಾಲ ಸೂಲ ಮಾಡಿ ಕಷ್ಟಪಟ್ಟು ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆದು ಹೇಗೋ ಜೀವನ ಸಾಗಿಸುತ್ತಿದ್ದಾರೆ. ಬಿತ್ತನೆ ಬೀಜ, ಗೊಬ್ಬರ, ಕೂಲಿ, ಕಟಾವು, ಸಾಗಣೆ ವೆಚ್ಚ, ಇತರ ವೆಚ್ಚಗಳು ಸೇರಿ ಮಾಡಿದ ಖರ್ಚು ಕೂಡ ಕೈಗೆ ಬಾರದೇ ಬೀದಿಗೆ ಬರುವ ಸ್ಥಿತಿ ಎದುರಾಗಿದೆ. ಹಾಗಾಗಿ, ಜಿಲ್ಲೆಯ ಕೃಷಿ, ತೋಟಗಾರಿಕೆ ಉತ್ಪನ್ನಗಳಿಗೆಲ್ಲ ಟೋಲ್ಫ್ರೀ ಆದೇಶ ಮಾಡಬೇಕು ಎಂದು ಅನ್ನದಾತರು ಒತ್ತಾಯಿಸಿದ್ದಾರೆ.
ಬೆಳೆಗಳನ್ನು ಜತನದಿಂದ ಕಾಪಾಡಿ ಕಟಾವು ಮಾಡಿ ಸಾಗಿಸುವ ಹೊತ್ತಿಗೆ ರೈತ ಸುಸ್ತಾಗಿರುತ್ತಾನೆ. ಈ ಮಧ್ಯೆ ಟೋಲ್ ಶುಲ್ಕದ ಹೊರೆಯಿಂದ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಈ ಕೂಡಲೇ ಟೋಲ್ಗಳಲ್ಲಿ ಕಬ್ಬು ಸಾಗಿಸುವ ವಾಹನಗಳಿಗೆ ಟೋಲ್ ಫ್ರೀ ಆದೇಶ ಪಾಲನೆಗೆ ಜಿಲ್ಲಾಧಿಕಾರಿ ಕ್ರಮ ಜರುಗಿಸಬೇಕು. | ಭುವನೇಶ್ವರ ಶಿಡ್ಲಾಪುರ, ಜಿಲ್ಲಾಧ್ಯಕ್ಷ ರಾಜ್ಯ ಕಬ್ಬು ಬೆಳೆಗಾರರ ಸಂಘ ರೈತರ ಮನವಿ ಮೇರೆಗೆ ಕಬ್ಬು ಸಾಗಣೆ ವಾಹನಗಳಿಗೆ ವಿನಾಯಿತಿ ನೀಡುವಂತೆ ಆದೇಶಿಸಲಾಗಿತ್ತು. ಇತ್ತೀಚೆಗೆ ಟೋಲ್ಗಳ ಗುತ್ತಿಗೆ ಬದಲಾವಣೆ ಆಗಿದ್ದು, ಎನ್ಎಚ್ಎಐನವರೇ ನೇರವಾಗಿ ಟೋಲ್ ನಿರ್ವಹಣೆ ಮಾಡುತ್ತಿದ್ದಾರೆ. ಈ ವಾರದೊಳಗೆ ಮತ್ತೊಂದು ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು. | ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ