ಅಕ್ಕಿಆಲೂರಲ್ಲಿ ಇಲ್ಲ ಪಾಯಿಖಾನೆ

07 AKR 01.
Published on

ಅಕ್ಕಿಆಲೂರ: ಪಟ್ಟಣದಲ್ಲಿ ಒಂದೂ ಸಾರ್ವಜನಿಕ ಶೌಚಗೃಹವಿಲ್ಲ. ಇದರಿಂದಾಗಿ ಜನನಿಬಿಡ ಪ್ರದೇಶಗಳು ಗಬ್ಬು ನಾರುತ್ತಿವೆ.

ಹಾನಗಲ್ಲ ಹೊರತು ಪಡಿಸಿದರೆ ಅತಿ ಹೆಚ್ಚು ವ್ಯಾಪಾರ, ವಹಿವಾಟು ನಡೆಯುವುದು ಅಕ್ಕಿಆಲೂರಿನಲ್ಲಿಯೇ. ಸಮುದಾಯ ಆರೋಗ್ಯ ಕೇಂದ್ರ, ಎರಡು ಪದವಿ ಕಾಲೇಜುಗಳು, ತಾಲೂಕಿನ ಏಕೈಕ ಪಿಕಾರ್ಡ್ ಬ್ಯಾಂಕ್, ಕೆಸಿಸಿ ಬ್ಯಾಂಕ್, ಹಾವೇರಿ ಜಿಲ್ಲೆಯಲ್ಲಿಯೇ ದೊಡ್ಡ ಜಾನುವಾರು ಮಾರುಕಟ್ಟೆ, ಹತ್ತಾರು ಶಿಕ್ಷಣ ಸಂಸ್ಥೆಗಳಿವೆ. ಹೋಬಳಿಗೆ 16 ಗ್ರಾಪಂಗಳ 50ಕ್ಕೂ ಹೆಚ್ಚು ಗ್ರಾಮಗಳು ಒಳಪಡುತ್ತವೆ. ಇಂತಹ ಪಟ್ಟಣದಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಗೃಹ ಇಲ್ಲದಿರುವುದು ಸಾರ್ವಜನಿಕರು ಮತ್ತು ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಿತ್ಯ ಜನದಟ್ಟಣೆ ಇರುವ ಸಿಂಧೂರ ಸಿದ್ದಪ್ಪ ವೃತ್ತ, ಪೇಟೆಓಣಿ, ಸಿ.ಎಂ. ಉದಾಸಿ ಹಾಗೂ ಮನೋಹರ ತಹಶೀಲ್ದಾರ ರಸ್ತೆಗಳಲ್ಲಿ ಹೆಚ್ಚು ಅಂಗಡಿ ಮುಂಗಟ್ಟು ಇದ್ದು, ಇಲ್ಲಿ ಶೌಚಗೃಹದ ಅಗತ್ಯವಿದೆ.

ಸ್ಥಳೀಯ ವ್ಯಾಪಾರಿಗಳು, ಗ್ರಾಹಕರು, ಬಸ್‌ಗಾಗಿ ಕಾಯುವ ವಿದ್ಯಾರ್ಥಿಗಳು ಅಲ್ಲಲ್ಲೆ ಇರುವ ಖಾಲಿ ನಿವೇಶನಗಳಲ್ಲಿ ಮೂತ್ರ ವಿಸರ್ಜನೆಗೆ ತೆರಳುತ್ತಿದ್ದಾರೆ. ಸದ್ಯ ತೀವ್ರ ಮಳೆಯಿಂದ ಎಲ್ಲ ಪ್ರದೇಶಗಳು ಕೆಸರು ಗದ್ದೆಯಾಗಿವೆ. ಜತೆಗೆ ಅಲ್ಲಲ್ಲಿ ಮೂತ್ರ ವಿಸರ್ಜನೆಯಿಂದ ಪ್ರದೇಶವೆಲ್ಲ ದುರ್ನಾತ ಬೀರುತ್ತಿದ್ದು, ಜನ ಮೂಗು ಮುಚ್ಚಿಕೊಂಡು ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರಂತೂ ಮರ್ಯಾದೆಗೆ ಅಂಜಿ ಮೂತ್ರವಿಸರ್ಜನೆಗೆ ತೆರಳುತ್ತಿಲ್ಲ. ಕೆಲವರು ದೂರದ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಹಣ ಸಂದಾಯ ಮಾಡಿ, ಮೂತ್ರ ವಿಸರ್ಜನೆಗಾದರೂ ಅವಕಾಶ ಸಿಕ್ಕರೆ ಸಾಕು ಎಂದು ಎನ್ನುತ್ತಿದ್ದಾರೆ ಸ್ಥಳೀಯ ವ್ಯಾಪಾರಿಗಳು.

ಗ್ರಾಪಂಗೆ ಸಾಧ್ಯವಾಗುತ್ತಿಲ್ಲ

ಸ್ಥಳೀಯ ವಿವಿಧ ಸಂಘಟನೆಗಳು, ವ್ಯಾಪಾರಸ್ಥರು ಅನೇಕ ಬಾರಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಶೌಚಗೃಹ ನಿರ್ಮಾಣಕ್ಕಾಗಿ ಆಗ್ರಹಿಸುತ್ತಿದ್ದಾರೆ. ಒತ್ತಾಯ ಕೇಳಿ ಬಂದಾಗಲೆಲ್ಲ ಸಭೆಯಲ್ಲಿ ಠರಾವು ಪಾಸ್ ಮಾಡಲಾಗುತ್ತಿದೆ, ಆದರೂ ಶೌಚಗೃಹ ನಿರ್ಮಾಣ ಮಾತ್ರ ಆಗಿಲ್ಲ. ಒಂದೆಡೆ ಜಾಗದ ಕೊರತೆ, ಮತ್ತೊಂದೆಡೆ ನಿರ್ವಹಣೆ ಸಮಸ್ಯೆ ಎದುರಾಗುತ್ತಿದೆ. ಸಿಂಧೂರ ಸಿದ್ದಪ್ಪ ವೃತ್ತದ ಬಸ್ ನಿಲ್ದಾಣದ ಹಿಂಭಾಗದಲ್ಲಿ ಮೂತ್ರಖಾನೆ ನಿರ್ಮಾಣಕ್ಕೆ ಮುಂದಾಗಿ, ಸುಮಾರು 50 ಸಾವಿರ ರೂ. ವೆಚ್ಚ ಮಾಡಿ ಅರ್ಧಕ್ಕೆ ಬಿಡಲಾಗಿದೆ.

ಎರಡು ಬಾರಿ ಲಿಖಿತ ಮನವಿ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಮತ್ತು ಪೇಟೆ ಓಣಿಯಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಾಣವಾಗಬೇಕು. ಇಲ್ಲದೆ ಹೊದರೆ, ಜನ ಸಿಕ್ಕಸಿಕ್ಕಲ್ಲಿ ಮೂತ್ರ ವಿಸರ್ಜನೆಗೆ ತೆರಳಿ ಪ್ರದೇಶವೆಲ್ಲ ಗಲೀಜಾಗುತ್ತದೆ. ಗ್ರಾಪಂ ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಮುಂದಾಗಬೇಕು. ಈರನಗೌಡ ಕೆರಿಮನಿ, ವ್ಯಾಪಾರಿ, ಅಕ್ಕಿಆಲೂರ ಈ ಬಾರಿಯ ಸಂತೆ ಹರಾಜು ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಸೂಚಿಸಲಾಗುವುದು. ಗ್ರಾಪಂಗೆ ಬಂದಿರುವ ಮನವಿ ಆಧಾರವಾಗಿ ಸಭೆಯಲ್ಲಿ ಗ್ರಾಪಂ ಸದಸ್ಯರೊಂದಿಗೆ ಚರ್ಚಿಸಿ, ನಿರ್ಮಾಣ ಕಾರ್ಯಕ್ಕೆ ಮುಂದಾಗುತ್ತೇವೆ. ಕುಮಾರ ಮಕರವಳ್ಳಿ, ಪಿಡಿಒ ಅಕ್ಕಿಆಲೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net