

ಅಂಕೋಲಾ: ಸರ್ಕಾರದ ಗ್ಯಾರಂಟಿಗಳಿಗಾಗಿ ಇಲ್ಲಿನ ತಹಸೀಲ್ದಾರ್ ಕಚೇರಿಗೆ ಬರುವವರ ಸಂಖ್ಯೆ ಹೆಚ್ಚಿದೆ. ಆದರೆ ಬಂದವರಿಗೆ ಶೌಚಗೃಹದ ವ್ಯವಸ್ಥೆ ಕಲ್ಪಿಸುವಲ್ಲಿ ತಾಲೂಕಾಡಳಿತ ನಿರ್ಲಕ್ಷ್ಯ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದೆಡೆ ತೀವ್ರವಾದ ಮಳೆ ಇನ್ನೊಂದೆಡೆ ಸರ್ಕಾರದ ಗ್ಯಾರಂಟಿಗಳಿಗೆ ಬೇಕಾಗಿ ದಾಖಲಾತಿ ತಿದ್ದುಪಡಿಗೆ ಸರತಿ ಸಾಲು ಈ ನಡುವೆ ಪ್ರಕೃತಿ ಕರೆಬಂತೆಂದರೆ ಅದಕ್ಕಾಗಿ ಅಲೆದಾಡುವ ಸ್ಥಿತಿ ತಹಸೀಲ್ದಾರ್ ಕಚೇರಿಯಲ್ಲಿದೆ.
ಸಮಸ್ಯೆ ಏನು?: ಕಚೇರಿಯ ಆವರಣದ ಹಿಂಬದಿಯಲ್ಲಿರುವ ಮೂರು ಶೌಚಗೃಹ ಮತ್ತು ಕಚೇರಿಯ ಪಡಸಾಲೆಯ ಒಳದಾರಿಗೆ ಹೊಂದಿಕೊಂಡಿರುವ ‘ತಹಸೀಲ್ದಾರ ಕಚೇರಿಯ ಸಿಬ್ಬಂದಿಗೆ ಮಾತ್ರ’ ಎನ್ನುವ ಶೌಚಾಲಯ ನಿರ್ವಹಣೆ ಇಲ್ಲದೇ ಬಾಗಿಲು ಮುಚ್ಚಿದೆ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಶೌಚಗೃಹ ಬಳಸಿ ಶುಚಿತ್ವ ಕಾಪಾಡಿ ಎಂದು ಜನರಿಗೆ ತಿಳುವಳಿಕೆ ಹೇಳಬೇಕಾದ ತಹಸೀಲ್ದಾರ್ ಕಚೇರಿಯಲ್ಲಿಯೇ ಸೂಕ್ತ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸ. ಸಮಸ್ಯೆ ಬಗೆಹರಿಸುವತ್ತ ಅಧಿಕಾರಿಗಳು ಚಿತ್ತಹರಿಸಬೇಕಿದೆ.| ಉಮೇಶ ಎನ್.ನಾಯ್ಕ ವಕೀಲ, ಅಂಕೋಲಾ
ಕಚೇರಿಯ ಆವರಣದಲ್ಲಿರುವ ನಾಲ್ಕು ಶೌಚಾಲಯವನ್ನು ಸಂಬಂಧಪಟ್ಟವರಿಂದ ಪರಿಶೀಲಿಸಿ ನಮ್ಮ ವ್ಯಾಪ್ತಿಯಲ್ಲಿ ಬರುವ ಸರ್ಕಾರದ ಅನುದಾನದ ಲಭ್ಯತೆ ಮೇರೆಗೆ ಅದನ್ನು ದುರಸ್ಥಿ ಮಾಡಿ ಸಾರ್ವಜನಿಕರಿಗೆ ಉಪಯೋಗಕ್ಕೆ ನೀಡಲಾಗುವುದು.| ಪ್ರವೀಣ ಹುಚ್ಚಣ್ಣನವರ ತಹಸೀಲ್ದಾರ್ ಅಂಕೋಲಾ