ಕಲ್ಲಾಡಿ ಸರ್ಕಾರಿ ಶಾಲೆಗೆ ಶಿಕ್ಷಕರಿಲ್ಲದೆ ಸಂಕಷ್ಟ

Kalladi govt School
Published on

ಧನಂಜಯ ಗುರುಪುರ

ಕುಪ್ಪೆಪದವು ಕಿಲೆಂಜಾರು ಗ್ರಾಮದ ಕಲ್ಲಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಪಾಠ ಪ್ರವಚನಕ್ಕೆ ತೊಂದರೆಯಾಗಿದೆ.

ಪ್ರಸ್ತುತ 58 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಓರ್ವ ಶಿಕ್ಷಕಿ, ಇಬ್ಬರು ಅತಿಥಿ ಶಿಕ್ಷಕಿಯರು ಕರ್ತವ್ಯದಲ್ಲಿದ್ದಾರೆ. ಈ ಮೊದಲು ಮೂವರು ಕಾಯಂ ಶಿಕ್ಷಕಿಯರಿದ್ದು, ಇಬ್ಬರು ವರ್ಗಾವಣೆಯಾಗಿದ್ದಾರೆ. ಮುಖ್ಯ ಶಿಕ್ಷಕರ ಹುದ್ದೆಯೂ ಖಾಲಿಯಿದ್ದು, ಈ ಹುದ್ದೆ ಭರ್ತಿಯಾಗಬೇಕಿದ್ದರೆ ಶಾಲೆಯಲ್ಲಿ 60 ವಿದ್ಯಾರ್ಥಿಗಳಿರಬೇಕು ಎಂಬುದು ಶಿಕ್ಷಣ ಇಲಾಖೆ ನಿಯಮ. ಈಗಿರುವ ಏಕೈಕ ಕಾಯಂ ಶಿಕ್ಷಕಿಯೇ ಮುಖ್ಯ ಶಿಕ್ಷಕಿಯ ಕರ್ತವ್ಯ ನಿರ್ವಹಿಸುವುದರೊಂದಿಗೆ ‘ನಲಿಕಲಿ’ ತರಗತಿ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರಸ್ತುತ ಶಿಕ್ಷಣ ನೀತಿಯಂತೆ ಶಾಲೆಯಲ್ಲಿರುವ 58 ಶಿಕ್ಷಕರಿಗೆ ಮೂವರು ಕಾಯಂ ಶಿಕ್ಷಕರ ನೇಮಕವೇ ಆಗಿಲ್ಲ. ಅತಿಥಿ ಶಿಕ್ಷಕರ ನೇಮಕ ತಾತ್ಕಾಲಿಕ ಎಂಬುದು ಸ್ಥಳೀಯ ಶಿಕ್ಷಣ ತಜ್ಞರ ಅಭಿಮತ. ಸರ್ಕಾರಿ ಶಾಲೆಗಳಿಗೆ ಮಕ್ಕಳ ಸೇರ್ಪಡೆಗೆ ಸರ್ಕಾರ ವಿಭಿನ್ನ ಕಸರತ್ತು ಮಾಡುತ್ತಿದೆ. ಕನಿಷ್ಠ 15 ವಿದ್ಯಾರ್ಥಿಗಳಿರುವ ಶಾಲೆ ಮುಚ್ಚಬಾರದೆಂದು ಹೇಳುತ್ತಿರುವ ಸರ್ಕಾರ ಮತ್ತು ಶಿಕ್ಷಣ ಇಲಾಖೆ 58 ವಿದ್ಯಾರ್ಥಿಗಳಿರುವ ಕಲ್ಲಾಡಿ ಶಾಲೆಯ ಶಿಕ್ಷಕರ ಕೊರತೆ ನೀಗಿಸುವಲ್ಲಿ ವಿಫಲವಾಗಿದ್ದು, ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಕೂಗು ಕೇಳಿ ಬಂದಿದೆ.

ಕಲ್ಲಾಡಿ ಶಾಲೆಯಲ್ಲಿದ್ದ ಮೂವರು ಶಿಕ್ಷಕಿಯರಲ್ಲಿ ಇಬ್ಬರು ಈಗಾಗಲೇ ವರ್ಗಾವಣೆಗೊಂಡಿದ್ದಾರೆ. ಪರ್ಯಾಯವಾಗಿ ಇಬ್ಬರು ಅತಿಥಿ ಶಿಕ್ಷಕಿಯರನ್ನು ನೇಮಿಸಲಾಗಿದೆ. 60ಕ್ಕೆ ಮೇಲ್ಪಟ್ಟು ಮಕ್ಕಳಿದ್ದರೆ ಮಾತ್ರ ಅಂತಹ ಶಾಲೆಗೆ ಮುಖ್ಯ ಶಿಕ್ಷಕರ ನೇಮಕಾತಿಗೆ ಅವಕಾಶವಿದೆ. ರಾಜಲಕ್ಷ್ಮಿ ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಕಲ್ಲಾಡಿ ಶಾಲೆಗೆ ನಾಲ್ವರು ಕಾಯಂ ಶಿಕ್ಷಕರನ್ನು ನೇಮಿಸಬೇಕೆಂಬ ಮನವಿಗೆ ಬೆಲೆ ಸಿಕ್ಕಿಲ್ಲ. ಎಲ್ಲ ಜವಾಬ್ದಾರಿಗಳ ಸಹಿತ ಕಾರ್ಯ ನಿರ್ವಹಿಸುತ್ತಿರುವ ಮೂವರು ಶಿಕ್ಷಕಿಯರು 58 ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹರ ಸಾಹಸಪಡುತ್ತಿದ್ದಾರೆ. ನಿಯಮಗಳೇನೇ ಇದ್ದರೂ ಈ ಶಾಲೆಗೆ ಇನ್ನೋರ್ವ ಶಿಕ್ಷಕ ನೇಮಕಾತಿ ಮಾಡಬೇಕು. ಅರುಣಾ ಬಿ.ಶೆಟ್ಟಿ ಬಾರ್ದಿಲ ಅಧ್ಯಕ್ಷೆ, ಶಾಲಾಭಿವೃದ್ಧಿ ಸಮಿತಿ, ಕಲ್ಲಾಡಿ ಪ್ರಾಥಮಿಕ ಶಾಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net