ಖಾಲಿ ಜೇಬು, ಹಸಿದ ಹೊಟ್ಟೆಗಿಂತ ಗುರುವಿಲ್ಲ

21hos1p nittur
ಹೆಬ್ಬಿಗೆ ಗ್ರಾಮದಲ್ಲಿ ಶ್ರೀಕಾಂತ್ ಬರುವೆ ಅವರನ್ನು ಸನ್ಮಾನಿಸಲಾಯಿತು. ಪ್ರಸನ್ನ ಉಡಚೆ, ಪುರುಷೋತ್ತಮ ಶಾನುಬೋಗ್, ಪಿ.ಆರ್.ಲಕ್ಷ್ಮೀನಾರಾಯಣ, ಹರ್ಷ ಕೆರೆಹೊಂಡ ಇತರರಿದ್ದರು.
Published on

ಹೊಸನಗರ: ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಬಡತನ, ಅವಮಾನಗಳು ನನ್ನ ಬದುಕನ್ನು ರೂಪಿಸಿಕೊಳ್ಳಲು ನೆರವಾಯಿತು. ಖಾಲಿ ಜೇಬು ಮತ್ತು ಹಸಿದ ಹೊಟ್ಟೆ ಬದುಕನ್ನು ಕಲಿಸುತ್ತದೆ ಎಂಬುದಕ್ಕೆ ನಾನೇ ಉದಾಹರಣೆ ಎಂದು ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ ಹೇಳಿದರು.

ತಾಲೂಕಿನ ನಿಟ್ಟೂರು ಸಮೀಪದ ಹೆಬ್ಬಿಗೆ ಗ್ರಾಮದಲ್ಲಿ ವಿದ್ಯಾಗಣಪತಿ ಉತ್ಸವ ಸಮಿತಿ ಆಯೋಜಿಸಿದ್ದ ಗಣೇಶೋತ್ಸವದಲ್ಲಿ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿ, ಪದವಿ ಮುಗಿಸಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ನನಗೆ ಆರ್‌ಎಸ್‌ಎಸ್ ಪ್ರಚಾರಕರೊಬ್ಬರು ಮಾಡಿದ ಸಹಾಯದಿಂದ ಎಲ್‌ಎಲ್‌ಬಿ ಓದಿ ಕಷ್ಟಪಟ್ಟು ಉನ್ನತ ಹುದ್ದೆಗೆ ಏರಿದ್ದೇನೆ ಎಂದರು.
ನನ್ನ ಇವತ್ತಿನ ಈ ಸ್ಥಿತಿಗೆ ನನ್ನ ಊರು ನೀಡಿದ ಸಂಸ್ಕಾರದ ಜತೆಗೆ ಆರ್‌ಎಸ್‌ಎಸ್ ಕಾರಣವಾಗಿದೆ. ಹುಟ್ಟಿದ ಈ ಊರಿನಲ್ಲಿ ಬಡತನದ ಜತೆಗೆ ಅನೇಕ ಅವಮಾನ ಅನುಭವಿಸಿದ್ದೆ. ಆದರೆ ಈಗ ಅದೇ ಜಾಗದಲ್ಲಿ ನನಗೆ ಮಾಡಿದ ಸನ್ಮಾನ ನನ್ನ ಜೀವನದ ಮಹತ್ವದ ಕ್ಷಣವಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹದಿಂದ ಈ ಹಂತ ತಲುಪಿದ್ದೇನೆ. ನನ್ನ ಸಾಧನೆಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.
ವಿದ್ಯಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಪ್ರಸನ್ನ ಉಡಚೆ ಮಾತನಾಡಿ, ಉನ್ನತ ಹುದ್ದೆಗೆ ಏರಿದ ನಮ್ಮ ಗ್ರಾಮದ ಶ್ರೀಕಾಂತ್ ಅವರ ಸಾಧನೆ ಇಡೀ ಗ್ರಾಮಕ್ಕೆ ಹೆಮ್ಮೆ ತಂದಿದೆ. ಇವರ ಮುಂದಿನ ಜೀವನ ಸಂತೋಷದಾಯಕವಾಗಿರುವುದರ ಜತೆ ಇನ್ನೂ ಹೆಚ್ಚಿನ ಕೀರ್ತಿ ತರಲಿ ಎಂದು ಆಶಿಸಿದರು.
ಶ್ರೀಕಾಂತ್ ವಿದ್ಯಾಭ್ಯಾಸ ಮಾಡಿದ ಹೆಬ್ಬಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸನ್ಮಾನದ ವೇಳೆ ಶ್ರೀಕಾಂತ್ ಪಾಲಕರು, ಪತ್ನಿ, ಸಹೋದರಿಯರು ಅವರ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ಗ್ರಾಪಂ ಸದಸ್ಯ ಪುರುಷೋತ್ತಮ ಶಾನುಬೋಗ್, ವಿದ್ಯಾಗಣಪತಿ ಉತ್ಸವ ಸಮಿತಿ ಕಾರ್ಯದರ್ಶಿ ಪಿ.ಆರ್.ಲಕ್ಷ್ಮೀನಾರಾಯಣ, ಹರ್ಷ ಕೆರೆಹೊಂಡ, ವಿಜಯ ಗದ್ದಲಗೋಡು, ವಾಸುದೇವ ಕೆಸರೆಮನೆ, ಮಂಜುಶ್ರೀ ಹೆಬ್ಬಿಗೆ, ಪ್ರಸನ್ನ ಕೆಪ್ಪಿಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net