

ಬೆಂಗಳೂರು ಯಮನ ಪಾಶಕ್ಕಿಂತಲೂ ವಿಷ್ಣು ಸಹಸ್ರನಾಮ ಶಕ್ತಿಶಾಲಿಯಾದದ್ದು. ವಿಷ್ಣು ಸಹಸ್ರನಾಮಕ್ಕೆ ಪರ್ಯಾಯ ಇಲ್ಲ. ಅದೇ ಅಂತಿಮ ಎಂದು ವಾಗ್ಮಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ ತಿಳಿಸಿದರು.
ಕೋಟಿ ಗೀತಾ ಲೇಖನ ಯಜ್ಞ ಸಮಿತಿ ಹಾಗೂ ಉಡುಪಿಯ ಭಾವಿ ಪರ್ಯಾಯ ಪುತ್ತಿಗೆ ಮಠದ ಸಹಯೋಗದಲ್ಲಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಗೀತೋತ್ಸವ’ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.
ವಿಷ್ಣು ಸಹಸ್ರನಾಮದಲ್ಲಿ ಪ್ರತಿ ಪದಕ್ಕೆ ನೂರು ಗುಣ, ಧರ್ಮ, ಪುಣ್ಯಗಳಿವೆ. ವಿಷ್ಣು ಸಹಸ್ರನಾಮ ಹೇಳಿಕೊಂಡಾಗ ಒಂದು ಪದಕ್ಕೆ ನೂರು ಲ ಬರಲಿದೆ. ಆದ್ದರಿಂದ ವಿಷ್ಣುಸಹಸ್ರನಾಮ ಸರ್ವಶ್ರೇಷ್ಠವಾಗಿದೆ. ದೇಶ ಮಾತ್ರವಲ್ಲದೆ, ಅಮೆರಿಕದಲ್ಲಿಯೂ ವಿಷ್ಣು ಸಹಸ್ರನಾಮ ಪಠಣ ಮಾಡುತ್ತಿದ್ದಾರೆ. ಇದರಿಂದ ನಿಮ್ಮಲ್ಲಿನ ಭಯ, ಆತಂಕಗಳಿಂದ ಪಾರಾಗಬಹುದು. ಯಶಸ್ಸು, ಶ್ರೇಯಸ್ಸು ಲಭಿಸಲಿದೆ ಎಂದು ಹೇಳಿದರು.
ಆಹಾರ ತಜ್ಞೆ ಡಾ. ಎಚ್.ಎಸ್. ಪ್ರೇಮಾ ಮಾತನಾಡಿ, ಮಕ್ಕಳಿಗೆ ಒಡವೆ, ಆಸ್ತಿಯನ್ನು ನೀಡುವುದಕ್ಕಿಂತ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವುದು ಬಹಳ ಮುಖ್ಯ. 21ನೇ ಶತಮಾನದಲ್ಲಿ ಭಗವದ್ಗೀತೆ ಹಿಂದೆಂದಿಗಿಂತಲೂ ಅವಶ್ಯಕತೆ ಇದೆ. ಸರಳ ಭಾಷೆಯಲ್ಲಿಯೇ ಭಗವದ್ಗೀತೆಯನ್ನು ಮನೆಯಲ್ಲಿಯೇ ಕೇಳಿ ತಿಳಿದುಕೊಂಡಾಗ ಮಕ್ಕಳು ಕೂಡ ಕೇಳಿ ಅನುಷರಿಸುತ್ತಾರೆ ಎಂದರು.
ಪ್ರಸ್ತುತ ದಿನಗಳಲ್ಲಿ ಯುವಕರು ದುರ್ಬಲ ಮನಸ್ಸಿನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಮತ್ತು ಆತ್ಮವಿಶ್ವಾಸ ಬೆಳೆಯಲು ವಿಷ್ಣು ಸಹಸ್ರನಾಮ ಪಾರಾಯಣ ಸಹಕಾರಿಯಾಗಲಿದೆ ಎಂದರು.
ಹಿಂದೂ ಸಮಾಜದ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವವರಿಗೆ ಉತ್ತರ ನೀಡಲು ಭಗವದ್ಗೀತೆಯನ್ನು ಸರಿಯಾಗಿ ಓದಿಕೊಳ್ಳಬೇಕಿದೆ. ಆಟೋ, ಟ್ಯಾಕ್ಸಿ ಚಾಲಕರಿಂದ ಹಿಡಿದು ದೊಡ್ಡ ಹುದ್ದೆಗಳಲ್ಲಿರುವವರು ಕೂಡ ಭಗವದ್ಗೀತೆಯನ್ನು ತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.
ಪುತ್ತಿಗೆ ಮಠದ ಸುಶ್ರೀಂದ್ರತೀರ್ಥ ಶ್ರೀಗಳು ಆಶೀರ್ವಚನ ನೀಡಿ, ಗೀತೆಯ ಅರ್ಥವನ್ನು ಸಾಮಾನ್ಯ ಜನರಿಗೆ ತಿಳಿಸುವ ಉದ್ದೇಶದಿಂದಲೇ ಮಧ್ವಾಚಾರ್ಯರು ಎರಡು ಬಾರಿ ಟಿಪ್ಪಣಿ ಬರೆದಿದ್ದಾರೆ. ಅದನ್ನು ಓದಿಕೊಂಡರೆ ಸಾಕಷ್ಟು ವಿಷಯಗಳು ತಿಳಿಯಲಿವೆ ಎಂದು ಹೇಳಿದರು.
ವಿಷ್ಣು ಸಹಸ್ರನಾಮ ಮತ್ತು ಭಗವದ್ಗೀತೆ ತಿಳಿಯುವುದರಿಂದ ಪುಣ್ಯ ಪ್ರಾಪ್ತಿಯಾಗಲಿದೆ. ಈ ಉದ್ದೇಶದಿಂದ ಕೋಟಿ ಜನರಿಂದ ಬರೆಸುವ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ಸ್ಪರ್ಧೆ ವಿಜೇತರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು, ಅದಮ್ಯ ಚೇತನ ಪ್ರತಿಷ್ಠಾನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸೇರಿ ಹಲವರು ಉಪಸ್ಥಿತರಿದ್ದರು.