

ಕಿಕ್ಕೇರಿ: ರಕ್ತಕ್ಕೆ ಪರ್ಯಾಯ ಯಾವುದೂ ಇಲ್ಲ. ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಬಹುದು ಎಂದು ಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾಪಟು ಕಿಕ್ಕೇರಿ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೆಬಲ್ ವಿನೋದ್ ತಿಳಿಸಿದರು.
ಪಟ್ಟಣದ ಅಂಗಡಿ ಬೀದಿಯಲ್ಲಿ ಗುರುವಾರ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಹಾಗೂ ಅಭಿಮಾನಿ ಬಳಗದಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ ಮಾತನಾಡಿದರು.
ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲ ಆರೋಗ್ಯವಂತರು ರಕ್ತದಾನ ಮಾಡಬಹುದು. ಜಯಂತಿ ನೆನಪಿನಲ್ಲಿ ಇಂತಹ ಸತ್ಕಾರ್ಯಗಳನ್ನು ಮಾಡಿದರೆ ಯುವಕರಲ್ಲಿ ಜಾಗೃತಿ ಮೂಡಲಿದೆ. ರಕ್ತದಾನ ಮಾಡಿದಷ್ಟು ರಕ್ತ ಮರು ಉತ್ಪತ್ತಿಯಾಗಲಿದೆ. ರಕ್ತದಾನ ಮಾಡುವುದರಿಂದ ಕೊಬ್ಬು ನಿವಾರಣೆ, ಜ್ಞಾಪಕ ಶಕ್ತಿ ವೃದ್ಧಿ, ಹೃದಯ ಸಂಬಂಧಿ ಸಮಸ್ಯೆ ದೂರವಾಗಲಿದೆ ಎಂದರು.
ವಡಕಹಳ್ಳಿ ರಾಜೇಶ್ ಮಾತನಾಡಿ, ಕೆಂಪೇಗೌಡರ ಆದರ್ಶದಂತೆ ಎಲ್ಲರೂ ಕೆರೆ-ಕಟ್ಟೆ, ಮರ-ಗಿಡ ಬೆಳೆಸಿ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.
ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಉಚಿತವಾಗಿ ತೆಂಗಿನ ಗಿಡ ವಿತರಿಸಲಾಯಿತು. ಮುಖಂಡರಾದ ಕಡಹೆಮ್ಮಿಗೆ ರಮೇಶ್, ಗಂಗೇನಹಳ್ಳಿ ರಘು, ವಡಕಹಳ್ಳಿ ಶಿವು, ರಾಜೇಶ್, ವೆಂಕಟೇಶ್, ಮಂಜು, ಪೃಥ್ವಿ, ಯೋಗೇಶ್, ರಾಕೇಶ್, ನವೀನ್, ಅರ್ಜುನ್ ಇದ್ದರು.