

ತಿ.ನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರತಿನಿಧಿಸುವ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರೋಗಿಗಳು ಸಮಸ್ಯೆ ಅನುಭವಿಸುವಂತಾಗಿದೆ.
ಆಸ್ಪತ್ರೆಯಲ್ಲಿ ನಿತ್ಯ 800 ರಿಂದ 1000 ಜನರು ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ಅದರಲ್ಲೂ ಬಹುಮುಖ್ಯವಾಗಿ ಸ್ತ್ರೀರೋಗ, ಚರ್ಮರೋಗ ಮತ್ತು ಕಿವಿ-ಗಂಟಲು ರೋಗ ತಜ್ಞರ ಕೊರತೆ ಕಾಡುತ್ತಿದೆ. ಚಿಕಿತ್ಸೆಗೆಂದು ಇಲ್ಲಿಗೆ ಬರುವ ಬಡವರು ವೈದ್ಯರಿಲ್ಲದ ಕಾರಣಕ್ಕೆ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ರೋಗಕ್ಕೆ ಮದ್ದು ಸಿಗಲಿದೆ ಎಂಬ ನಂಬಿಕೆಯೊಂದಿಗೆ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಆದರಲ್ಲಿ ನುರಿತ ವೈದ್ಯರಿಲ್ಲದ ಪರಿಣಾಮ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಹಿಡಿಶಾಪ ಹಾಕುತ್ತ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡಬೇಕಾಗಿದೆ. ಇನ್ನು ಆಸ್ಪತ್ರೆಯಲ್ಲಿ ಶವಾಗಾರ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ವ್ಯಾಪ್ತಿಯಲ್ಲಿ ಅಪಘಾತಗಳು ಸಂಭವಿಸಿ ಮೃತಪಟ್ಟವರ ಶವವನ್ನು ಆಸ್ಪತ್ರೆಗೆ ತಂದ ವೇಳೆ ಎಲ್ಲಿ ಇಡಬೇಕು ಎಂಬುದು ದೊಡ್ಡ ಸಮಸ್ಯೆಯಾಗಿದೆ. ಸ್ಥಳೀಯ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.
ಸರ್ಕಾರ ಬಡವರ ಪರವಾಗಿದ್ದು ಅರ್ಹರು ಅನುಕೂಲ ಪಡೆದುಕೊಳ್ಳಬಹುದು ಎಂಬ ನಾಮಫಲಕ ಹೆಸರಿಗೆ ಮಾತ್ರ ಇದೆ. ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಈ ರೀತಿ ಸಮಸ್ಯೆಯಾದರೆ ರಾಜ್ಯದ ಇತರೆಡೆ ಇರುವ ಆಸ್ಪತ್ರೆಗಳ ಗತಿ ಏನು ಎಂಬುದು ಜನರ ಪ್ರಶ್ನೆಯಾಗಿದೆ. ಈ ಸಂಬಂಧ ಸಾರ್ವಜನಿಕರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಾಮಗಾರಿ ಶೀಘ್ರ ಪ್ರಾರಂಭ
ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇಲ್ಲ. ಇಬ್ಬರು ಸ್ತ್ರೀ ರೋಗ ತಜ್ಞರಿದ್ದಾರೆ. ಹೆರಿಗೆ ಸಮಯದಲ್ಲಿ ವೈದ್ಯರು ಬೇಕು ಎಂದಾಗ ಇಬ್ಬರು ವೈದ್ಯರಿದ್ದಾರೆ. ಆಸ್ಪತ್ರೆಯಲ್ಲಿ ಶವಾಗಾರ ತೆರೆಯುವ ಸಂಬಂಧ ಸರ್ಕಾರದಿಂದ ಈಗಾಗಲೇ ಅನುಮೋದನೆ ಸಿಕ್ಕಿದ್ದು, ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ.
ಡಾ.ಜಗನ್ನಾಥ್ ಆಡಳಿತಾಧಿಕಾರಿ, ಸಾರ್ವಜನಿಕ ಆಸ್ಪತ್ರೆ
ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಜಿಲ್ಲಾ ವೈದ್ಯಾಧಿಕಾರಿಯೊಂದಿಗೆ ಚರ್ಚೆ ಮಾಡಲಾಗಿದೆ. ಇಲ್ಲಿಗೆ ಅಗತ್ಯವಿರುವ ತಜ್ಞವೈದ್ಯರನ್ನು ನೇಮಿಸುವುದರ ಜತೆಗೆ ಇತರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಈ ಆಸ್ಪತ್ರೆಯನ್ನು ಮಾದರಿಯನ್ನಾಗಿಸುವ ಮೂಲಕ ರೋಗಿಗಳಿಗೆ ಅನುಕೂಲ ಮಾಡಿಕೊಡಲಾಗುವುದು.
ಯತಿಂದ್ರ ಸಿದ್ದರಾಮಯ್ಯ ಮಾಜಿ ಶಾಸಕ
ಚರ್ಚೆ ನಡೆಸಿದ್ದರೂ ಪ್ರಯೋಜನವಾಗಿಲ್ಲ
ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಬಹೆಹರಿಸಲು ಈ ಹಿಂದೆ ಶಾಸಕರಾಗಿದ್ದ ಯತೀಂದ್ರ ಸಿದ್ದರಾಮಯ್ಯ ಅವರು ಜಿಲ್ಲಾ ವೈಧ್ಯಾಧಿಕಾರಿಯೊಂದಿಗೆ ಚರ್ಚಿಸಿದ್ದರು. ವೈದ್ಯರ ಕೊರತೆ ಸೇರಿದಂತೆ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಈ ಹಿಂದೆ ಇದ್ದ ತಜ್ಞರನ್ನು ವರ್ಗಾವಣೆ ಮಾಡಲಾಗಿದ್ದು, ಈಗ ಸಮಸ್ಯೆ ಎದುರಾಗಿದೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ಈ ಪರಿಸ್ಥಿತಿಯಾದರೆ ಬೇರೆಡೆಯ ಪರಿಸ್ಥಿತಿ ಏನು?
ಕರೋಹಟ್ಟಿ ಪ್ರಭುಸ್ವಾಮಿ ವಿಚಾರವಾದಿ
ಸರ್ಕಾರದೊಂದಿಗೆ ಪತ್ರ ವ್ಯವಹಾರ
ಸ್ತ್ರೀ ರೋಗ, ಚರ್ಮರೋಗ ವೈದ್ಯರ ಕೊರತೆ ಇದ್ದು, ಈ ಸಂಬಂಧ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡಲಾಗಿದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿರುವ ವೈದ್ಯರನ್ನು ನಾವು ವರ್ಗಾವಣೆ ಮಾಡುವಂತಿಲ್ಲ. ಏಕೆಂದರೆ ಅಲ್ಲಿನ ರೋಗಿಗಳಿಗೆ ಸಮಸ್ಯೆಯಾಗುತ್ತದೆ. ಹಾಗಾಗಿ ಪ್ರತ್ಯೇಕವಾಗಿ ವೈದ್ಯರನ್ನು ನೇಮಿಸುವಂತೆ ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ.
ಡಾ.ರವಿಕುಮಾರ್ ತಾಲೂಕು ವೈದ್ಯಾಧಿಕಾರಿ
ಪ್ರತಿಭಟನೆ ಉದ್ದೇಶ ಈಡೇರಿಲ್ಲ
ನೋಡಲ್ ಅಧಿಕಾರಿ ವಸಂತಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭ ವೈದ್ಯರ ಕೊರತೆ ಇರುವ ಬಗ್ಗೆ ಗಮನಕ್ಕೆ ತರಲಾಗಿತ್ತು. ಅವರೇ ಈ ಬಗ್ಗೆ ಕಾಳಜಿ ವಹಿಸಬೇಕು. ಈ ಬಗ್ಗೆ ಪ್ರತಿಭಟನೆಯನ್ನೂ ಮಾಡಲಾಗಿತ್ತು. ಮುಖ್ಯಮಂತ್ರಿಗಳು ಹಾಗೂ ಶಾಸಕರ ಗಮನಕ್ಕೂ ತರಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ
ಡಾ.ಚಂದ್ರಶೇಖರ್ ಜಿಲ್ಲಾ ಸಂಚಾಲಕ, ಡಿಎಸ್‌ಎಸ್
ವೈದ್ಯರಿದ್ದರೂ ಅನುಕೂಲವಿಲ್ಲ
ಸರ್ಕಾರಿ ಆಸ್ಪತ್ರೆಗೆ ಬಡವರು ಬರುತ್ತಾರೆ. ಹೆಚ್ಚಾಗಿ ಆ ವರ್ಗ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದರೂ ಯಾವುದೇ ಪ್ರಯೋಜನವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಪ್ರತಿನಿಧಿಸುವ ಕ್ಷೇತ್ರದಲ್ಲಿ ಈ ಆಸ್ಪತ್ರೆ ಇರುವುದರಿಂದ ಇದನ್ನು ಉನ್ನತೀಕರಿಸಬಹುದು. ಈ ಸಂಬಂಧ ಮನವಿ ನೀಡಿದ್ದರೂ ಕೆಲಸ ಮಾತ್ರ ಆಗಿಲ್ಲ. ಇದಕ್ಕೆ ಕಾರಣ ಏನೆಂಬುದು ತಿಳಿದಿಲ್ಲ.
ಆರಿಫ್ ಅಧ್ಯಕ್ಷ, ನಾಗರಿಕ ಸೇವಾ ಸಂಸ್ಥೆ
ಹೆರಿಗೆಗಾಗಿ ಲಕ್ಷಾಂತರ ರೂ. ಖರ್ಚು
ಹೆರಿಗೆಗೆಂದು ಆಸ್ಪತ್ರೆಗೆ ಬರುವವರಿಗೆ ಯಾವುದೇ ಸೌಲಭ್ಯಗಳಿಲ್ಲ. ಅಲ್ಲದೆ ಇಲ್ಲಿನ ಸಿಬ್ಬಂದಿ ರೋಗಿಗಳಿಗೆ ಜಿಲ್ಲಾಸ್ಪತ್ರೆಗೆ ಹೋಗುವಂತೆ ಹೇಳುತ್ತಾರೆ. ಏನಾಗುತ್ತದೊ ಎಂಬ ಭಯದಿಂದ ಬಹುತೇಕರು ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುವಂತಾಗಿದೆ. ಜತೆಗೆ ಲಕ್ಷಾಂತರ ರೂ. ಖರ್ಚು ಮಾಡಿ ಹೆರಿಗೆ ಮಾಡಿಸುವ ಅನಿವಾರ್ಯ ಎದುರಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಏಕೆ ಇರುತ್ತಾರೆಂಬುದು ತಿಳಿಯುತ್ತಿಲ್ಲ. ಇದು ನಮ್ಮ ಆಸ್ಪತ್ರೆಯ ಪಾಡು.
ಜ್ಞಾನೇಂದ್ರಮೂರ್ತಿ ವಕೀಲ
ಒಂದು ವಾರದಲ್ಲಿ ನಿಯೋಜನೆ
ಕೆಡಿಪಿ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಈಗಾಗಲೇ ಈ ಸಂಬಂದ ಚರ್ಚೆ ಮಾಡಲಾಗಿದೆ. ಚರ್ಮರೋಗ ತಜ್ಞ, ಇಎನ್‌ಟಿ ಮತ್ತು ಸ್ತ್ರೀರೋಗ ತಜ್ಞರನ್ನು ಒಂದು ವಾರದಲ್ಲಿ ನಿಯೋಜನೆ ಮಾಡುವ ವ್ಯವಸ್ಥೆ ಆಗಿದೆ. ಆ ಮೂಲಕ ರೋಗಿಗಳಿಗೆ ಅನುಕೂಲ ಮಾಡಿಕೊಡಲಾಗುವುದು. ಆಸ್ಪತ್ರೆಯಲ್ಲಿ ಯಾವುದೇ ವೈದ್ಯರ ಸಮಸ್ಯೆಯಾಗದಂತೆ ಕ್ರಮವಹಿಸಿ ಎಂದು ನಿರ್ದೇಶನ ನೀಡಿದ್ದು, ಅದನ್ನು ಪಾಲನೆ ಮಾಡಲಾಗುವುದು.
ಡಾ.ಕುಮಾರಸ್ವಾಮಿ ಜಿಲ್ಲಾ ವೈದ್ಯಾಧಿಕಾರಿ
ದಾದಿಯರು ಕೆಲಸ ಮಾಡಲಿ
ಮಹಿಳಾ ವೈದ್ಯರು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಿದರೆ ಹೆರಿಗೆ ಸಂದರ್ಭ ಮತ್ತು ಮಹಿಳೆಯರಿಗೆ ಅನುಕೂಲ. ಗರ್ಭಿಣಿಯರ ತಪಾಸಣೆ ಹಾಗೂ ಹೆರಿಗೆ ಸಂದರ್ಭದಲ್ಲಿ ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಒಬ್ಬ ಡಾಕ್ಟರ್ ಇರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಹಾಗಾಗಿ ರಾತ್ರಿ ಪಾಳಿಯಲ್ಲಿ ಮಹಿಳಾ ದಾದಿಯರನ್ನು ನೇಮಿಸಿದರೆ ಅನುಕೂಲ.
ಮಂಗಳಸಗೌರಿ ರಾಮೇಗೌಡನಪುರ ನಿವಾಸಿ
ಕೊಳ್ಳೇಗಾಲ, ನಂಜನಗೂಡು, ಮಳವಳ್ಳಿ ಹಾಗೂ ಮೈಸೂರು ಭಾಗದಿಂದ ಈ ಆಸ್ಪತ್ರೆಗೆ ರೋಗಿಗಳು ಚಿಕಿತ್ಸೆಗೆಂದು ಬರುತ್ತಾರೆ. ಹಾಗಾಗಿ ಇಲ್ಲಿ ಎಲ್ಲ ರೀತಿಯ ಸೌಲಭ್ಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಅವರು ಕ್ರಮ ವಹಿಸಬೇಕು. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ಹಮ್ಮಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಿಬ್ಬಂದಿ ಹಾಗೂ ವೈದ್ಯರ ಕೊರತೆ ನೀಗಿಸುವುದರ ಜತೆಗೆ ಮೂಲ ಸೌಕರ್ಯ ಕಲ್ಪಿಸಲಿದ್ದಾರೆಯೇ ಎಂದು ಕಾದು ನೋಡಬೇಕು.
ಪುಟ್ಟಮ್ಮಣ್ಣಿ ಮಹಿಳಾ ಪದಾಧಿಕಾರಿ, ಡಿಎಸ್‌ಎಸ್