

ಕುಮಟಾ: ಇಲ್ಲಿನ ವಾಕರಸಾ ಬಸ್ ನಿಲ್ದಾಣದಲ್ಲಿ ಆಸನಗಳ ಕೊರತೆಯಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.
ನಿಲ್ದಾಣದಲ್ಲಿ ಎರಡು ಸಾಲುಗಳಲ್ಲಿ ಅಲ್ಲಲ್ಲಿ ಬೆಂಚು ಅಳವಡಿಸಲಾಗಿದೆ. ಒಂದು ಬೆಂಚಿನ ಮೇಲೆ ಹೆಚ್ಚೆಂದರೆ ನಾಲ್ವರು ಕುಳಿತುಕೊಳ್ಳಬಹುದು. ಆದರೆ, ಇಡೀ ಬಸ್ ನಿಲ್ದಾಣದಲ್ಲಿ 40-50 ಮಂದಿ ಕೂರುವುದಕ್ಕೂ ವ್ಯವಸ್ಥೆಯಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಮಧ್ಯವರ್ತಿ ಸ್ಥಳ ಹಾಗೂ ಕೊಂಕಣ ರೈಲ್ವೆ ನಿಲ್ದಾಣದ ಪಕ್ಕವೇ ಇರುವುದರಿಂದ ಬಸ್ ನಿಲ್ದಾಣ ಸದಾ ಪ್ರಯಾಣಿಕರಿಂದ ಗಿಜುಗುಡುತ್ತದೆ. ಜತೆಗೆ ಶಾಲೆ, ಕಾಲೇಜು ಬಿಡುವ ವೇಳೆ, ಮಧ್ಯಾಹ್ನ ಹಾಗೂ ಸಾಯಂಕಾಲದ ಹೊತ್ತಿನಲ್ಲಿ, ರಜಾ ದಿನಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುತ್ತದೆ. ಕುಳಿತುಕೊಳ್ಳುವುದಿರಲಿ ನಿಲ್ಲಲೂ ಜಾಗ ಸಾಲದು. ವಯೋವೃದ್ಧರು, ಅಂಗವಿಕಲರು, ಅನಾರೋಗ್ಯಪೀಡಿತರು ಲಗೇಜ್ ಮೇಲೆ ಕುಳಿತು ಬಸ್ಸಿಗಾಗಿ ಕಾಯುವ ಪರಿಸ್ಥಿತಿ ಇರುತ್ತದೆ.
ಸಾರಿಗೆ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಜಾರಿ ಬಳಿಕ ಇಲ್ಲಿನ ಬಸ್ ನಿಲ್ದಾಣದಲ್ಲಿ ಹತ್ತಿಳಿಯುವ ದೂರದ ಊರುಗಳ ಪ್ರಯಾಣಿಕ ಸಂಖ್ಯೆ ಹಲವಾರು ಪಟ್ಟು ಹೆಚ್ಚಿದೆ. ರಜಾ ದಿನಗಳಲ್ಲಂತೂ ಮುಖ್ಯವಾಗಿ ಹುಬ್ಬಳ್ಳಿ ಮಾರ್ಗದ ಬಸ್‌ನಲ್ಲಿ ಸೀಟ್ ಹಿಡಿಯುವದಿರಲಿ, ಬಸ್ ಹತ್ತುವುದೇ ಕಷ್ಟಕಷ್ಟ ಎಂಬಂತಿರುತ್ತದೆ. ನಾಲ್ಕಾರು ತಾಸು ಕಾದರೂ ಬಸ್ ಹತ್ತಲಾಗದೇ, ಸೀಟ್ ಸಿಗದೇ ನಿರಾಶರಾಗಬೇಕಾಗುತ್ತದೆ.
ಹೀಗಾಗಿ ಬಸ್ ನಿಲ್ದಾಣದೊಳಗೆ ಆಸನಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಅನುಕೂಲವಾಗಲಿದೆ. ಈ ಬಗ್ಗೆ ಸಂಬಂಧಿಸಿದ ಸಾರಿಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.