ಕಾಯಕ ತತ್ವ ಪಾಲಿಸುವವರಿಗೆ ಕಾಯಿಲೆ ಇಲ್ಲ;

Vijay sankeshwar 30 Jan 20
Published on

ಧಾರವಾಡ: ದರಿದ್ರರನ್ನು ಶ್ರೀಮಂತರನ್ನಾಗಿ, ದಡ್ಡರನ್ನು ದೊಡ್ಡವರನ್ನಾಗಿ, ಭಿಕ್ಷುಕರನ್ನು ಲಕ್ಷಾಧಿಪತಿಯನ್ನಾಗಿ ಬೆಳೆಸುವ ಶಕ್ತಿ ನಮ್ಮ ಪರಂಪರೆಯಲ್ಲಿದೆ. ನಮ್ಮನ್ನು ಸಮೃದ್ಧಿಯ ಕಡೆಗೆ ಕರೆದೊಯ್ಯುವುದೇ ಕಾಯಕ ಶಕ್ತಿ. ಬಸವಾದಿ ಶರಣರು ಜಗತ್ತಿಗೆ ನೀಡಿದ ಕಾಯಕ ತತ್ವ ಪಾಲಿಸುವವರಿಗೆ ಕಾಯಿಲೆ ಇಲ್ಲ ಎಂದು ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮುರುಘಾಮಠದ ಶ್ರೀಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಕೊಡಮಾಡುವ 2020ನೇ ಸಾಲಿನ ‘ಶ್ರೀ ಮೃತ್ಯುಂಜಯ-ಮಹಾಂತ’ ಪ್ರಶಸ್ತಿಯನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರಿಗೆ ಪ್ರದಾನ ಮಾಡಿ ಮಾತನಾಡಿದರು. ಕಾಯ ಇರುವುದು ಕಾಯಕ ಮಾಡುವುದಕ್ಕೋಸ್ಕರವೇ ಹೊರತು ಸುಖ ಅನುಭವಿಸುವುದಕ್ಕಲ್ಲ. ಮನುಷ್ಯನ ದೇಹಕ್ಕೆ ಕಾಯಿಲೆ ಬರದಂತೆ ಕಾಪಾಡುವುದೇ ಕಾಯಕ. ಹಾಗಾಗಿ ಶರಣರು ತ್ಯಾಗಿ- ನಿರೋಗಿಯಾಗಿದ್ದರು. ಅದೇ ಕಾಯಕ ಸಿದ್ಧಾಂತದಲ್ಲಿ ದಾಸೋಹ ಸಿದ್ಧಾಂತ ಅಡಗಿದೆ. ಕಾಯಕ ಧೀಮಂತ, ದಾಸೋಹ ಶ್ರೀಮಂತ ಸಂಸ್ಕೃತಿ. ಇವೆರಡರಲ್ಲಿ ಶರಣ ಸಂಸ್ಕೃತಿ ಅಡಗಿದೆ ಎಂದರು.

ಮುರುಘೇಂದ್ರರು, ಮೃತ್ಯುಂಜಯಪ್ಪ, ಮಹಾಂತಪ್ಪನವರ ದೇವರು ಬಸವಣ್ಣ. ಶ್ರೀಮಠಕ್ಕೆ ಬಂದರೆ ಈ ನಾಲ್ವರ ತತ್ವಗಳ ದರ್ಶನವಾಗುತ್ತದೆ. ಶ್ರೀ ಮೃತ್ಯುಂಜಯ- ಮಹಾಂತ ಪ್ರಶಸ್ತಿಗೆ ಭಾಜನರಾದ ವಿಜಯ ಸಂಕೇಶ್ವರರು ಬಸವಣ್ಣನವರ ತತ್ವಗಳನ್ನು ಅಂತರಂಗ- ಬಹಿರಂಗಗಳಲ್ಲಿ ಅಳವಡಿಸಿಕೊಂಡವರು. ಕಾಯಕ ತತ್ವದ ಮೂಲಕ ವಿಆರ್​ಎಲ್ ಸಂಸ್ಥೆಯನ್ನು ದೇಶ-ವಿದೇಶಗಳಲ್ಲಿ ವಿಸ್ತರಿಸಿದ ಅವರೊಬ್ಬ ಕಾಯಕಯೋಗಿ. ಬಸವಣ್ಣನವರ ಮೂರ್ತಿ ನಿರ್ವಣಕ್ಕೆ 1 ಕೋಟಿ ರೂ. ಘೊಷಿಸಿರುವ ಅವರ ಔದಾರ್ಯತೆ ಶ್ಲಾಘನೀಯ ಎಂದು ಬಣ್ಣಿಸಿದರು.

‘ಶ್ರೀ ಮೃತ್ಯುಂಜಯ- ಮಹಾಂತ’ ಪ್ರಶಸ್ತಿ ಸ್ವೀಕರಿಸಿದ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಮಾತನಾಡಿ, ಧಾರವಾಡ ಮುರುಘಾಮಠಕ್ಕೂ ನಮ್ಮ ಕುಟುಂಬಕ್ಕೂ ಹತ್ತಿರದ ಸಂಬಂಧವಿದೆ. ತಂದೆಯವರು 14-15 ವರ್ಷದವರಿದ್ದಾಗ ಮಠದಲ್ಲಿ 8 ತಿಂಗಳು ಇದ್ದರು ಎಂದು ಸ್ಮರಿಸಿದರು. ಕಳೆದ ವರ್ಷ ಮುರುಘಾಮಠದಲ್ಲಿ ಒಂದೇ ದಿನ 111 ಪುಸ್ತಕ ಬಿಡುಗಡೆ ಮಾಡಿದ್ದರು. ಸಾವಿರಾರು ಮಠಗಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಆದರೆ ಒಂದೇ ದಿನ 111 ಪುಸ್ತಕ ಬಿಡುಗಡೆ ಮಾಡಿದ ಮಠ ಇದೊಂದೇ ಎಂದರು.

ಚಿಕ್ಕಂದಿನಿಂದಲೇ ಹೆಚ್ಚು ಕೆಲಸ ಮಾಡುವುದು ನನ್ನ ಅಭ್ಯಾಸ. ಹೊಟ್ಟೆಪಾಡಿಗಾಗಿ, ಬದುಕುವ ಸಲುವಾಗಿ ದುಡಿದಿದ್ದೇನೆ. ಅದರ ಫಲವಾಗಿ ದೇವರ ಆಶೀರ್ವಾದವೂ ದೊರೆಯಿತು. ನ್ಯಾಯಯುತವಾಗಿ, ಬೆವರು ಸುರಿಸಿ ದುಡಿದ ಪ್ರತಿಫಲದಿಂದ ಪದ್ಮ ಪ್ರಶಸ್ತಿಗೂ ಆಯ್ಕೆ ಮಾಡಿದ್ದಾರೆ. ಪಾಲಕರು ತಮ್ಮ ಮಕ್ಕಳಿಗೆ ಕಾಯಕದ ಮಾರ್ಗ ತೋರಿಸಬೇಕು. ಅಂಕ ಪಡೆಯುವುದೊಂದೇ ಮುಖ್ಯವಲ್ಲ ಎಂದು ತಿಳಿಸಿಕೊಟ್ಟು, ಕಾಯಕದ ಅರಿವು ಮೂಡಿಸಬೇಕು. ನಮ್ಮ ಕಾಯಕದ ಬಗ್ಗೆ ಯಾರಾದರೂ ತುಚ್ಛವಾಗಿ ಮಾತನಾಡಿದರೆ ಕೊರಗದೆ, ತಂದೆ- ತಾಯಿ ಮತ್ತು ವೃತ್ತಿಯನ್ನು ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು.

ಇತ್ತೀಚೆಗೆ ಹಾಫ್ ಐರನ್​ವ್ಯಾನ್ ಪ್ರಶಸ್ತಿ ಸ್ವೀಕರಿಸಿ ಕ್ರೀಡಾ ಸಾಧನೆಗೈದ ಸಂಚಾರ ಠಾಣೆ ಇನ್​ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಅವರನ್ನು ಸನ್ಮಾನಿಸಲಾಯಿತು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶೇಗುಣಸಿ ಮಠದ ಶ್ರೀ ಮಹಾಂತ ದೇವರು ಸಾನ್ನಿಧ್ಯ ವಹಿಸಿದ್ದರು. ಶ್ರೀಮತಿ ಲಲಿತಾ ಸಂಕೇಶ್ವರ, ಶಾಸಕ ಅರವಿಂದ ಬೆಲ್ಲದ, ಶ್ರೀ ಅಭಿನವಪ್ರಭು ಸ್ವಾಮೀಜಿ, ಶಿವಣ್ಣ ಬೆಲ್ಲದ, ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ.ಲಕಮನಹಳ್ಳಿ, ಗುರುನಾಥ ಸೋಮಣ್ಣನವರ, ಶಿವಶಂಕರ ಹಂಪಣ್ಣವರ, ವಿ.ಎಸ್.ಪಾಟೀಲ, ಸಿದ್ರಾಮಣ್ಣ ನಡಕಟ್ಟಿ, ರಾಜು ಮರಳಪ್ಪನವರ ಇತರರಿದ್ದರು.

ಮುರುಘಾಮಠಕ್ಕೆ ಶ್ರೀ ಮೃತ್ಯುಂಜಯ ಹಾಗೂ ಮಹಾಂತಪ್ಪ ಸೇವೆ ಸ್ಮರಣೀಯ. ಅವರ ಗುರು- ಶಿಷ್ಯ ಪರಂಪರೆ ನಾಡಿಗೆ ಮಾದರಿ. ಈಗಿನ ಮಲ್ಲಿಕಾರ್ಜುನ ಶ್ರೀಗಳು ಪುಸ್ತಕ, ಧಾರ್ವಿುಕ ಸಾಹಿತ್ಯಕ್ಕೆ ಆದ್ಯತೆ ನೀಡಿ ಸಾಹಿತ್ಯದ ಬೆಳವಣಿಗೆಗೆ ಕಾರಣರಾಗಿದ್ದಾರೆ. | ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಗದುಗಿನ ತೋಂಟದಾರ್ಯ ಮಠ

ಬಸವಣ್ಣನ ಮೂರ್ತಿ ಸ್ಥಾಪನೆಗೆ 1 ಕೋಟಿ ರೂ. ದೇಣಿಗೆ ಘೋಷಣೆ

ಚಿತ್ರದುರ್ಗದ ಮುರುಘಾ ಶ್ರೀಗಳು ಬಸವೇಶ್ವರರ ಬೃಹತ್ ಮೂರ್ತಿ ಸ್ಥಾಪನೆ ಮಾಡುತ್ತಿದ್ದಾರೆ. ಅದಕ್ಕೆ 100 ಕೋಟಿ ರೂ.ಗಿಂತ ಹೆಚ್ಚು ಖರ್ಚಾಗುತ್ತದೆಂದು ಹೇಳಿದ್ದಾರೆ. ಅದಕ್ಕೆ ನನ್ನ ಸ್ವಂತ 1 ಕೋಟಿ ರೂ. ಕೊಡುತ್ತೇನೆ. ಇದು ಕಂಪನಿಯಿಂದಲ್ಲ ಎಂದು ಡಾ.ವಿಜಯ ಸಂಕೇಶ್ವರ ಪ್ರಕಟಿಸಿದರು. ನಾಡಿನ ಸಮಸ್ತ ಭಕ್ತರು ದೇಣಿಗೆ ಸಲ್ಲಿಸಿದರೆ ಮೂರ್ತಿ ನಿರ್ಮಾಣ ಶೀಘ್ರ ಮುಗಿಸಲು ಸಾಧ್ಯವಾಗುತ್ತದೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಆದಷ್ಟು ಬೇಗ ಮೂರ್ತಿ ನಿರ್ವಣವಾದರೆ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಉದ್ಘಾಟನೆ ಮಾಡಿಸೋಣ ಎಂದು ಆಶಯ ವ್ಯಕ್ತಪಡಿಸಿದ ಅವರು, ಬಸವಣ್ಣನವರ ಕಟ್ಟಾ ಅನುಯಾಯಿ ಪ್ರಧಾನಿ ನರೇಂದ್ರ ಮೋದಿ. ಅವರು ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net