ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲ : ಸಚಿವ ಡಾ.ಎಚ್.ಸಿ. ಮಹದೇವಪ್ಪ

seeds distribution
Published on

ಮೈಸೂರು: ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಕೊರತೆ ಇಲ್ಲ, ರೈತರ ಬೇಡಿಕೆಗೆ ಅನುಸಾರವಾಗಿ ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ಜಿಲ್ಲೆಯಲ್ಲಿ ಮಾರ್ಚ್ 1 ರಿಂದ ಮೇ 30ರವರೆಗೆ ಪೂರ್ವ ಮುಂಗಾರಿನಲ್ಲಿ ವಾಡಿಕೆ ಮಳೆ 199.10 ಮಿ.ಮೀ. ಸುರಿಯಬೇಕಾಗಿತ್ತು. ಆದರೆ, 207.2 ಮಿ.ಮೀ. ಮಳೆಯಾಗಿದ್ದು, ಶೇ.4.59 ರಷ್ಟು ಹೆಚ್ಚುವರಿ ಮಳೆಯಾಗಿದೆ. ಜೂ.1 ರಿಂದ ಜು.27ರವರೆಗೆ ಮುಂಗಾರಿನಲ್ಲಿ 202.1 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ, 166.5 ಮಿ.ಮೀ. ಮಳೆಯಾಗಿದ್ದು, ಮಳೆಯ ಪ್ರಮಾಣ ಶೇ.17.61 ಮಿ.ಮೀ. ಕಡಿಮೆಯಾಗಿದೆ. ಮಳೆಯ ಕೊರತೆ ಶೇ.19ಕ್ಕಿಂತ ಮೇಲ್ಪಟ್ಟು ಇದ್ದರೆ ಮಾತ್ರ ಅದನ್ನು ಕೊರತೆ ಎಂದು ಪರಿಗಣಿಸಲಾಗುತ್ತದೆ. ಶೇ.19 ರೊಳಗೆ ಇದ್ದರೆ ನಾರ್ಮಲ್ ಎಂದು ಪರಿಗಣಿಸಲಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಬಾರಿ ಮುಂಗಾರು ತಡವಾಗಿ ಪ್ರಾರಂಭಗೊಂಡಿರುವ ಹಿನ್ನೆಲೆಯಲ್ಲಿ ರೈತರು ಅಲ್ಪಾವಧಿಯ ಭತ್ತದ ತಳಿಗಳನ್ನು ಬಿತ್ತನೆ ಮಾಡ ಬೇಕು, ಇಲ್ಲವಾದಲ್ಲಿ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ. ಮುಂಗಾರಿನಲ್ಲಿ 3,97,879 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ 2,11,170 ಹೆಕ್ಟೇರ್‌ನಲ್ಲಿ (ಶೇ.53) ಬಿತ್ತನೆಯಾಗಿದೆ. ಒಟ್ಟು 88,786 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, ಕೃಷಿ ಇಲಾಖೆಯು ಒಟ್ಟು 88,930 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಿಕೊಂಡು, ಇದುವರೆಗೆ 2,137 ಕ್ವಿಂಟಾಲ್ ಬಿತ್ತನೆ ಬೀಜವನ್ನು ವಿತರಿಸಿದೆ. ಒಟ್ಟು 1.27 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆ ಇದ್ದು, ಒಟ್ಟು 1.28 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಮಾಡಿಕೊಂಡು ಇಲ್ಲಿಯವರೆಗೆ 0.866 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆ ಮಾಡಲಾಗಿದೆ. ರಸಗೊಬ್ಬರವು ಖಾಸಗಿ ಮಾರಾಟಗಾ ರರು ಹಾಗೂ ಸಹಕಾರ ಸಂಘಗಳಲ್ಲಿ ದಾಸ್ತಾನಿದ್ದು, ಕೊರತೆ ಇಲ್ಲ ಎಂದು ತಿಳಿಸಿದರು.

ಪ್ರಸಕ್ತ ಸಾಲಿನಿಂದ ಬಿತ್ತನೆ ಬೀಜಗಳನ್ನು ರೈತರಿಗೆ ಕೆ-ಕಿಸಾನ್ ವೆಬ್‌ಸೈಟ್ ಮೂಲಕ ಕ್ಯೂಆರ್ ಕೋಡ್ ಬಳಕೆ ಮಾಡಿಕೊಂಡು ವಿತರಿಸ ಲಾಗುತ್ತಿದೆ. ಈ ವಿಧಾನದಿಂದ ಯಾವ ರೈತರು ಯಾವ ಬೆಳೆ ಬೆಳೆಯುತ್ತಾರೆ, ಅವರಿಗೆ ಎಷ್ಟು ಬಿತ್ತನೆ ಬೀಜದ ಅವಶ್ಯಕತೆ ಇದೆ ಎಂಬ ಸ್ಪಷ್ಟವಾದ ಮಾಹಿತಿ ದೊರೆಯುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿದೆ. ರೈತರೇ ಅವರ ಜಮೀನಿನ ಬೆಳೆ ಮಾಹಿತಿಯನ್ನು ಫ್ರೂಟ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಜಿಲ್ಲೆಯಲ್ಲಿ ಬೆಳೆಯುವ ಒಟ್ಟು 19 ಬೆಳಗಳನ್ನು ಅಧಿಸೂಚಿಸಲಾಗಿದ್ದು, ಇದರಲ್ಲಿ 4 ತೋಟಗಾರಿಕಾ ಬೆಳೆಗಳು ಸೇರಿವೆ. ರೈತರು ಹೆಚ್ಚಿನ ವಿವರಗಳಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯ ಕೃಷಿ ನಿರ್ದೇಶಕರ ಕಚೇರಿ, ತೋಟಗಾರಿಕಾ ಇಲಾಖೆ, ಗ್ರಾಮ ಒನ್, ಸಮೀಪದ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಆರ್. ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net