ಅಭಿವೃದ್ಧಿ ಕಾಮಗಾರಿಗೆ ಅನುದಾನದ ಕೊರತೆ ಇಲ್ಲ

Abbayya new
Published on

ಹುಬ್ಬಳ್ಳಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾರ್ಯಗಳೂ ನಿರಂತವಾಗಿ ನಡೆಯುತ್ತಲೇ ಇವೆ. ಆದರೆ, ವಿರೋಧ ಪಕ್ಷದವರು ಸರ್ಕಾರದಲ್ಲಿ ಅನುದಾನವೇ ಇಲ್ಲವೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಶಾಸಕ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.

ಹು-ಧಾ ಪೂರ್ವ ಕ್ಷೇತ್ರ ವ್ಯಾಪ್ತಿಯ ಸೆಟಲ್​ವೆುಂಟ್ ಕ್ರಿಶ್ಚಿಯನ್ ಕಾಲನಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿ, ಸೆಟಲ್​ವೆುಂಟ್​ನಲ್ಲಿ 10ಲಕ್ಷ ರೂ.ದಲ್ಲಿ ರಸ್ತೆ ಅಭಿವೃದ್ಧಿ ಮತ್ತು ಎಸ್.ಎಂ. ಕೃಷ್ಣ ನಗರದಲ್ಲಿ 50 ಲಕ್ಷ ರೂ. ಅನುದಾನದಲ್ಲಿ ಉದ್ಯಾನವನ ಸೇರಿ ಒಟ್ಟು 1.10ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ಅವರು ಮಾತನಾಡಿದರು.

ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿಗಾಗಿ ಅನುದಾನ ತರಲು ಹೆಣಗಾಡುವ ಪರಿಸ್ಥಿತಿ ಇತ್ತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎಂಟೇ ತಿಂಗಳಲ್ಲಿ ಕೋಟ್ಯಾಂತರ ರೂ. ಅನುದಾನ ನೀಡಿದೆ. ಸರ್ಕಾರದಲ್ಲಿ ಅನುದಾನ ಕೊರತೆ ಇಲ್ಲ ಎಂಬುದಕ್ಕೆ ಅಭಿವೃದ್ಧಿ ಕಾಮಗಾರಿಗಳೇ ನಿದರ್ಶನ ಎಂದರು.

ಅತ್ಯುತ್ತಮ ವಿನ್ಯಾಸ ಮತ್ತು ಉತ್ತಮ ಗುಣಮಟ್ಟದ ಕಾಮಗಾರಿಯಿಂದ ಯೋಜನೆ ಸಫಲವಾದಾಗ ಮಾತ್ರ ಸರ್ಕಾರದ ಅನುದಾನಕ್ಕೆ ನ್ಯಾಯ ದೊರಕುತ್ತದೆ. ಹೀಗಾಗಿ, ಕಾಮಗಾರಿಯನ್ನು ಉತ್ತಮ ರೀತಿಯಲ್ಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಾಂಗ್ರೆಸ್ ಮುಖಂಡ ಶಾಮ ಜಾಧವ ಮಾತನಾಡಿದರು. ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಪಂಪಣ್ಣ ಅಂಬಿಗೇರಿ, ಬಾಬಾಜಾನ್ ಕಾರಡಗಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ್, ಗುತ್ತಿಗೆದಾರರು, ಕಾಂಗ್ರೆಸ್ ಮುಖಂಡರು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net