ಅಭಿವೃದ್ಧಿಗೆ ಅನುದಾನ ಕೊರತೆ ಇಲ್ಲ

abbayya prasad
Published on

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿಗೆ ಯಾವತ್ತೂ ಅನುದಾನದ ಕೊರತೆಯಾಗಿಲ್ಲ. ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ಕೊಡಬೇಕೆಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ನಗರದ ಬಮ್ಮಾಪೂರ ಓಣಿಯಲ್ಲಿ ಭಾನುವಾರ 1.5ಕೋಟಿ ರೂ. ಅನುದಾನದಲ್ಲಿ ಒಳಚರಂಡಿ ನಾಲಾ ತಡೆಗೋಡೆ, 82ನೇ ವಾರ್ಡ್​ನಲ್ಲಿ 1ಕೋಟಿ ರೂ. ಅನುದಾನದಲ್ಲಿ ಸಿಸಿ ರಸ್ತೆ, ಭಾರತ ನಗರದಲ್ಲಿ ಸಮುದಾಯ ಭವನ ಮತ್ತು ಸೆಟ್ಲಮೆಂಟ್​ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿ 2.85 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ಎರಡು ಅವಧಿಯಲ್ಲಿ ವಾರ್ಡ್ ನಂ. 62ರ ಮಂಟೂರು ರಸ್ತೆ ಭಾಗದಲ್ಲಿ 200 ಕೋಟಿ ರೂ. ಅಧಿಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಕಾಲಿಡಲು ಆಗದಂತ ಪರಿಸ್ಥಿತಿ ಅಲ್ಲಿತ್ತು. ಅತ್ಯಂತ ಕನಿಷ್ಠ ಜೀವನಮಟ್ಟ ಕಂಡು ಆದ್ಯತೆ ಮೇರೆಗೆ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಇಂದು ಗಲ್ಲಿಗಲ್ಲಿಗೂ ಸಿಸಿ ರಸ್ತೆ, ನೀರು, ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ನನ್ನ ಅಭಿವೃದ್ಧಿ ಕಾರ್ಯ ನೋಡಿ ಸತತ ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಮುಖಂಡ ಮೋಹನ ಅಸುಂಡಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net