ಆಹಾರ ಧಾನ್ಯ, ಅಗತ್ಯ ವಸ್ತುಗಳ ಕೊರತೆ ಇಲ್ಲ

PRALHAD JOSHI
Published on

ಹುಬ್ಬಳ್ಳಿ : ಯುದ್ಧದ ಹೆಸರಿನಲ್ಲಿ ಅಕ್ರಮವಾಗಿ ಆಹಾರ ಧಾನ್ಯ ಮತ್ತು ವಸ್ತುಗಳ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ದುಪ್ಪಟ್ಟು ದಾಸ್ತಾನಿದ್ದು, ಯಾವುದೇ ರೀತಿಯ ಕೊರತೆ ಇಲ್ಲ. ಜನಸಾಮಾನ್ಯರು, ವರ್ತಕರು ಯಾರೂ ಈ ಬಗ್ಗೆ ಚಿಂತಿತರಾಗಬೇಕಿಲ್ಲ ಎಂದರು.

ಅಕ್ಕಿ, ಗೋಧಿ, ಸಕ್ಕರೆ, ಕಡಲೆ, ತೊಗರಿ, ಹೆಸರುಕಾಳು, ಖಾದ್ಯ ತೈಲ ಸೇರಿದಂತೆ ಎಲ್ಲ ರೀತಿಯ ಆಹಾರ ಧಾನ್ಯ ಸಾಕಷ್ಟು ದಾಸ್ತಾನಿದೆ. ಆದರೂ ಆಹಾರ ಪದಾರ್ಥಗಳ ಕೊರತೆ ಇದೆ ಎಂಬ ವದಂತಿ ಹಬ್ಬಿಸಲಾಗಿದೆ. ಇದಕ್ಕೆ ಯಾರೂ ಕಿವಿಗೊಡಬಾರದು, ಭಯಭೀತರಾಗಬಾರದು ಎಂದು ಹೇಳಿದರು.

ಅನಗತ್ಯ ದಾಸ್ತಾನು ಮಾಡುವವರ ಮೇಲೆ ಕಣ್ಣಿಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯಕ್ಕಿಂತ ಹೆಚ್ಚು ಆಹಾರ ಧಾನ್ಯ ಖರೀದಿಗೆ ಮಾರುಕಟ್ಟೆಗಳಲ್ಲಿ ಮುಗಿಬೀಳುವ ಅವಶ್ಯಕತೆಯಿಲ್ಲ. ವಿನಾಕಾರಣ ಯಾರಾದರೂ ಸುಳ್ಳು ವದಂತಿ ಹರಡಲು ಯತ್ನಿಸಿದರೆ ಹಾಗೂ ವರ್ತಕರು ಹೆಚ್ಚು ಹೆಚ್ಚು ಸಂಗ್ರಹ ಮಾಡಿಟ್ಟುಕೊಂಡರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net