

ವಿಜಯವಾಣಿ ವಿಶೇಷ ಮೈಸೂರು
ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ದಾಸ್ತಾನು ಇದ್ದು, ಅಭಾವ ಇಲ್ಲ. ಈ ವಾರದಿಂದ ಯೂರಿಯಾ ಪೂರೈಕೆ ಆಗಲಿದೆ. ಗೊಬ್ಬರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸುವ ಪ್ರಯತ್ನ ನಡೆಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ಎಚ್ಚರಿಸಿದರು.
ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಕಚೇರಿಯಲ್ಲಿ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ರೈತರ ಕರೆಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಯೂರಿಯಾ ಬದಲಾಗಿ ಕಾಂಪ್ಲೆಕ್ಸ್ ಕೂಡ ಬಳಸಬಹುದು. ಕಾಂಪ್ಲೆಕ್ಸ್ ನಮ್ಮಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನಿದೆ ಎಂದರು.
ಜಿಲ್ಲೆಯಲ್ಲಿ 3842.54 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನಿದೆ. 3199.48 ಮೆಟ್ರಿಕ್ ಟನ್ ಡಿಎಪಿ ಇದೆ. ಎಂಒಪಿ 2163.56 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ 16499.87 ಮೆಟ್ರಿಕ್ ಟನ್ ಇದೆ. ನಮಗೆ ಡಿಎಪಿ, ಪಿಒಪಿ, ಕಾಂಪ್ಲೆಕ್ಸ್ ಸಮಸ್ಯೆ ಇಲ್ಲ. ಆದರೆ, ಯೂರಿಯಾ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಿದೆ ಎಂದು ತಿಳಿಸಿದರು.
ಕೆಲವು ಕಡೆಗಳಲ್ಲಿ ಗೊಬ್ಬರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಲು ಪ್ರಯತ್ನ ನಡೆಸುತ್ತಿರುವ ಕುರಿತು ದೂರುಗಳು ಕೇಳಿ ಬಂದಾಗ ದಾಳಿ ನಡೆಸಿ ಮಾರಾಟಗಾರರಿಗೆ ನೋಟಿಸ್ ನೀಡಲಾಗಿದೆ. ನಿಮ್ಮ ಊರಿನಲ್ಲಿ ಈ ರೀತಿ ಗೊಬ್ಬರದ ಕೃತಕ ಅಭಾವವನ್ನು ಮಾರಾಟಗಾರರು ಸೃಷ್ಟಿಸಿದರೆ ತಕ್ಷಣ ಕೃಷಿ ಇಲಾಖೆಗೆ ಮಾಹಿತಿ ನೀಡಿ ಎಂದು ರೈತರಲ್ಲಿ ಮನವಿ ಮಾಡಿಕೊಂಡರು.
ಗೊಬ್ಬರ ಮಾರಾಟಗಾರರೊಬ್ಬರು ನಂಜನಗೂಡು ತಾಲೂಕಿನ ನಾಲ್ಕು ಎಕರೆ ಜಾಗದಲ್ಲಿ ನಕಲಿ ಡಿಎಪಿ, ಎನ್‌ಒಪಿ ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಿದ್ದರು. ರೈತರೊಬ್ಬರ ಮಾಹಿತಿ ಆಧರಿಸಿ ಈ ಅಕ್ರಮವನ್ನು ಕೃಷಿ ಇಲಾಖೆ ತಡೆಯುವಲ್ಲಿ ಯಶಸ್ವಿಯಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಖಚಿತ ಮಾಹಿತಿ ಆಧರಿಸಿ ಮೈಸೂರು ತಾಲೂಕಿನ ಮಂಡಕಳ್ಳಿ ಗ್ರಾಮದ ಹಳೇ ಕೋಳಿ ಫಾರ್ಮ್‌ನಲ್ಲಿ ನಕಲಿ ರಸಗೊಬ್ಬರದ ಗೋದಾಮಿನ ಮೇಲೆ ದಾಳಿ ನಡೆಸಿ ರಸಗೊಬ್ಬರ ತಯಾರಿಕೆಗೆ ಬಳಸುತ್ತಿದ್ದ ಪರಿಕರಗಳೊಂದಿಗೆ ಮೂರು ಟನ್ ನಕಲಿ ರಸಗೊಬ್ಬರ ಮೂಟೆಗಳನ್ನು ವಶಪಡಿಸಿಕೊಂಡಿದ್ದೇವೆ. ಈ ಎರಡು ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯೂರಿಯಾ ಸಮಸ್ಯೆಯೂ ಬಗೆಹರಿಯಲಿದೆ: ಈ ವಾರದಲ್ಲಿ ಯೂರಿಯಾ ಸಮಸ್ಯೆಯೂ ಬಗೆಹರಿಯುತ್ತದೆ. ಪ್ರತಿ ವರ್ಷ ಈ ವೇಳೆ 4,183 ಮೆಟ್ರಿಕ್ ಟನ್ ಯೂರಿಯಾ ಬೇಕು. ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಕೇಂದ್ರ ಕಚೇರಿ 8 ಸಾವಿರ ಮೆಟ್ರಿಕ್ ಟನ್ ಯೂರಿಯಾ ಹಂಚಿಕೆಗೆ ನೀಡಿದೆ. ರಸಗೊಬ್ಬರವನ್ನು ನೇರವಾಗಿ ಸೊಸೈಟಿಗಳಿಗೆ ಕಳುಹಿಸಿ ನಂತರ ಖಾಸಗಿ ಡೀಲರ್‌ಗಳಿಗೆ ನೀಡುತ್ತಿದ್ದೇವೆ. ನಂಜನಗೂಡು, ತಿ.ನರಸೀಪುರ, ಕೆ.ಆರ್.ನಗರದಿಂದ ಹೆಚ್ಚಿನ ಬೇಡಿಕೆ ಇದ್ದು, ಮೊದಲು ಅಲ್ಲಿಗೆ ಹಂಚಿಕೆ ಮಾಡುತ್ತೇವೆ ಎಂದರು.
ಇಂಥದನ್ನೇ ಖರೀದಿಸಿದರೆ ಮಾತ್ರ ಈ ಗೊಬ್ಬರ ನೀಡುತ್ತೇವೆ ಎಂದು ಒತ್ತಾಯ ಮಾಡದಂತೆ ಜಿಲ್ಲೆಯ ರಸಗೊಬ್ಬರ ಮಾರಾಟಗಾರರು ಮತ್ತು ಕೀಟನಾಶಕ ಸಂಘಕ್ಕೆ ಸೂಚನೆ ನೀಡಿದ್ದೇವೆ. ಈ ಸಂಬಂಧ ರಸಗೊಬ್ಬರ ಸರಬರಾಜು ಮಾಡುವ ಕಂಪನಿಗಳಿಗೂ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
ಸಾವಯವದತ್ತ ಕೃಷಿಕರು ಚಿತ್ತಹರಿಸಿ
ರಾಸಾಯನಿಕ ಕೃಷಿ ಪದ್ಧತಿಯಿಂದ ಕೃಷಿ ಭೂಮಿ ಫಲವತ್ತತೆ ನಾಶವಾಗುತ್ತಿರುವುದು ಒಂದೆಡೆಯಾದರೆ, ಜನರ ಆರೋಗ್ಯ ಕೂಡ ಹಾಳಾಗುತ್ತಿದೆ. ಹೀಗಾಗಿ ಜನರ ಆರೋಗ್ಯದ ಜತೆಗೆ ಭೂಮಿ ಆರೋಗ್ಯವನ್ನೂ ಕಾಪಾಡಲು ರೈತರು ‘ಸಾವಯವ’ ಕೃಷಿಯತ್ತ ಚಿತ್ತ ಹರಿಸುವುದು ಉತ್ತಮ. ಆಸಕ್ತ ರೈತರಿಗೆ ಅಗತ್ಯ ತರಬೇತಿ ನೀಡಲಾಗುವುದು ಎಂದು ಡಾ.ಬಿ.ಎಸ್.ಚಂದ್ರಶೇಖರ್ ತಿಳಿಸಿದರು.
50 ವರ್ಷಗಳ ಹಿಂದೆ ದೇಶದ ಜನಸಂಖ್ಯೆಗೆ ಆಹಾರ ಉತ್ಪಾದನೆ ಕಷ್ಟವಾಗಿತ್ತು. ಆದ್ದರಿಂದ ರಾಸಾಯನಿಕ ಕೃಷಿ ಆರಂಭಿಸಿದೆವು. ಈಗ ನಮ್ಮ ದೇಶಕ್ಕೆ ಸಾಕಾಗಿ, ಹೊರ ದೇಶಕ್ಕೂ ಆಹಾರ ರಫ್ತು ಮಾಡುತ್ತಿದ್ದೇವೆ. ಇಂದಿನ ಇಂಗಾಲ ನೋಡಿದರೆ ಕೆಲ ವರ್ಷದಲ್ಲಿ ಭೂಮಿ ಬರಡಾಗಲಿದೆ. ಇದಕ್ಕೆ ‘ಸಾವಯವ’ ಪರಿಹಾರವಾಗಿದೆ ಎಂದರು.
ಈ ಸಂಬಂಧ ಮಣ್ಣಿನ ಸತ್ವ ಹೆಚ್ಚಿಸುವ ಸಾವಯವ ಇಂಗಾಲ ಕಾರ್ಯಕ್ರಮ, ಸೆಣಬು ಸೇರಿದಂತೆ ಇತರ ಬೀಜ ನೀಡುವುದು, ಕಾಂಪ್ಲೆಕ್ಸ್, ಎರೆಹುಳ ಗೊಬ್ಬರ ಸೇರಿದಂತೆ ವಿವಿಧ ಸಾವಯವ ಗೊಬ್ಬರವನ್ನು ರೈತರಿಗೆ ಸಬ್ಸಿಡಿ ರೂಪದಲ್ಲಿ ನೀಡುತ್ತಿದ್ದೇವೆ. ಜೆಎಸ್‌ಎಸ್, ಕೆವಿಕೆ ಸೇರಿದಂತೆ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳನ್ನು ನೋಡಲ್ ಏಜೆನ್ಸಿ ರೀತಿ ಮಾಡಿಕೊಂಡು ಪ್ರತಿ ಹೋಬಳಿಯಲ್ಲಿ ಸಾವಯವ ಕೃಷಿ ಬಗ್ಗೆ ಪ್ರಚಾರ ಮಾಡಲಾಗುತ್ತದೆ. ಜತೆಗೆ ಸಾವಯವ ಕೃಷಿಗೆ ಸಂಬಂಧಿಸಿ ಗೊಬ್ಬರಗಳನ್ನು ನೀಡುವುದು, ತೊಟ್ಟಿ ಕಟ್ಟಿಸಿಕೊಂಡವರಿಗೆ ಎರೆಹುಳು ನೀಡುವುದು, ಸಾವಯವ ಬೀಜ, ಹಸಿರು ಎಲೆ ಬೀಜ ನೀಡುವ ಕಾರ್ಯವನ್ನು ಆಯಾಯ ಸಂಸ್ಥೆಗಳ ಮೂಲಕ ಮಾಡಿಸಲಾಗುತ್ತಿದೆ. ಜಿಲ್ಲೆಯಲ್ಲಿ 400 ರಿಂದ 450 ರೈತರು ಸಾವಯವ ಕೃಷಿ ಮಾಡುತ್ತಿದ್ದಾರೆ. ಮುಂದೆ ಇವರ ಅನುಭವದ ಮೂಲಕ ಇತರ ರೈತರನ್ನು ಸಾವಯವ ಕೃಷಿ ಕಡೆ ಆಕರ್ಷಿಸಲಾಗುತ್ತದೆ ಎಂದು ಹೇಳಿದರು.
ಆನ್‌ಲೈನ್ ತರಬೇತಿ:
ನಾಗನಹಳ್ಳಿ ಕೃಷಿ ತರಬೇತಿ ಕೇಂದ್ರದಲ್ಲೂ ರೈತರಿಗೆ ಅನೇಕ ತರಬೇತಿ ನೀಡುತ್ತಿದ್ದೇವೆ. ಕೋವಿಡ್ ಸಮಯದಲ್ಲಿ ಆನ್‌ಲೈನ್ ಮೂಲಕ 48 ಸಾವಿರ ಜನರಿಗೆ ತರಬೇತಿ ನೀಡಿದ್ದೇವೆ. ಈ ಪೈಕಿ ಶೇ.60 ರಷ್ಟು ಸಾವಯವ ಕೃಷಿ ಬಗ್ಗೆ ತರಬೇತಿ ನೀಡಿದ್ದೇವೆ. ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಹಾಸನ, ಕೊಡಗು ಜಿಲ್ಲೆಯ ರೈತರು ಅನುಕೂಲ ಪಡೆದಿದ್ದಾರೆ. ಶೇ.60ರಷ್ಟು ಮೈಸೂರು ರೈತರು ಉಪಯೋಗ ಪಡೆದಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಕೆಲವೊಂದು ಪ್ರದೇಶಗಳಲ್ಲಿ, ವಿಶೇಷವಾಗಿ ಜ್ಯೋತಿ ಭತ್ತ ಕೃಷಿ ಮಾಡುವ ರೈತರ ಜಮೀನುಗಳಲ್ಲಿ ಬೆಂಕಿರೋಗ ಕಾಣಿಸಿಕೊಳ್ಳುವುದು ಸಾಮಾನ್ಯ. ಬೆಂಕಿರೋಗ ತಡೆ ಕುರಿತು ರೈತರು ಕೃಷಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಸರ್ಟಿಫಿಕೇಟ್ ಖಾತ್ರಿಪಡಿಸಿಕೊಳ್ಳಿ:
ಕೆಲವರು ರಾಸಾಯನಿಕ ಕೃಷಿ ಪದ್ಧತಿಯಲ್ಲಿ ಬೆಳೆದ ಬೆಳೆಗಳನ್ನು ಸಾವಯವ ಉತ್ಪನ್ನದ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಡೆಯುವ ಸಲುವಾಗಿ ಸಾವಯವ ಕೃಷಿಕರಿಗೆ ದೃಢೀಕರಣ ಪತ್ರ ನೀಡುವ ಕಾರ್ಯ ನಡೆಯುತ್ತಿದ್ದು, ಇದನ್ನು ಜನರು ಗಮನಿಸಬೇಕೆಂದು ಡಾ.ಬಿ.ಎಸ್.ಚಂದ್ರಶೇಖರ್ ಸಲಹೆ ನೀಡಿದರು.
ಸತತ ಮೂರು ವರ್ಷಗಳ ಕಾಲ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡು ಭೂಮಿ ಸಂಪೂರ್ಣ ಸಾವಯವ ಕೃಷಿಗೆ ಪರಿವರ್ತನೆಯಾದ ನಂತರ ದೃಢೀಕರಣ ಪತ್ರ ದೊರೆಯಲಿದೆ ಎಂದರು.
ಜಿಲ್ಲೆಯಲ್ಲಿ ಶೇ. 66ರಷ್ಟು ಬಿತ್ತನೆ
ಮುಂಗಾರು ಹಂಗಾಮಿನಲ್ಲಿ ಶೇ.66 ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಮುಂಗಾರಿಗೆ 3,95,827 ಹೆಕ್ಟೇರ್‌ನಷ್ಟು ಗುರಿ ಹೊಂದಿದ್ದು, 2,59,391 ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಭತ್ತ ಶೇ.28 ರಷ್ಟು ಮಾತ್ರ ಆಗಿದ್ದು, ಇನ್ನು 15 ದಿನಗಳು ಸಮಯ ಇದೆ. ರಾಗಿ ಶೇ.23 ರಷ್ಟು ಬಿತ್ತನೆಯಾಗಿದ್ದು, ಸೆಪ್ಟೆಂಬರ್ ಅಂತ್ಯದವರೆಗೆ ಸಮಯ ಇದೆ. ಉದ್ದು, ಹೆಸರು, ಅಲಸಂದೆ, ಹುರುಳಿ, ಮುಸುಕಿನ ಜೋಳ, ನೆಲಗಡಲೆ, ಎಳ್ಳು ಉತ್ತಮವಾಗಿ ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದರು.
ಈ ಬಾರಿ ಜಿಲ್ಲೆಯಲ್ಲಿ ಆಗಸ್ಟ್ 16ರವರೆಗೆ ವಾಡಿಕೆಗಿಂತ ಶೇ.71 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿದೆ. 470.2 ಮಿ.ಮೀ. ರಷ್ಟು ವಾಡಿಕೆ ಪ್ರಮಾಣದಲ್ಲಿ ಮಳೆ ನಿರೀಕ್ಷಿಸಲಾಗಿತ್ತು. 797.6 ಮಿ.ಮೀ. ಮಳೆಯಾಗಿದೆ. ಈ ಪೈಕಿ 900.4 ಮಿ.ಮೀ. ಮಳೆಯಾಗಿರುವ ಎಚ್.ಡಿ.ಕೋಟೆ ಮೊದಲ ಸ್ಥಾನದಲ್ಲಿದೆ. ಹುಣಸೂರು(789.0 ಮಿ.ಮೀ.), ಕೆ.ಆರ್.ನಗರ(946.5), ಮೈಸೂರು(751.6), ನಂಜನಗೂಡು(665.6), ಪಿರಿಯಾಪಟ್ಟಣ(916.0), ತಿ.ನರಸೀಪುರ(719.9), ಸರಗೂರು(754.3) ಮಳೆಯಾಗಿದೆ ಎಂದು ಮಾಹಿತಿ ನೀಡಿದರು.
ಕನಿಷ್ಠ ಬೆಲೆ ನಿಗದಿ:
ಬೆಂಬಲ ಬೆಲೆ ಸಂಬಂಧ ಈ ವಾರದಲ್ಲಿ ಕೇಂದ್ರ ಸರ್ಕಾರ ಸಭೆ ನಡೆಸಲಿದೆ. ಕನಿಷ್ಠ ಬೆಂಬಲ ವ್ಯಾಪ್ತಿಗೆ ಯಾವ ಯಾವ ಬೆಳೆಗಳನ್ನು ಸೇರಿಸಬೇಕು, ಎಷ್ಟು ಬೆಲೆ ನಿಗದಿ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನವಾಗಲಿದೆ. ಕಳೆದ ವರ್ಷ ಭತ್ತಕ್ಕೆ 1,815 ರೂ., ರಾಗಿಗೆ 3,300 ರೂ. ಇತ್ತು. ಈ ಬಾರಿ ರಾಗಿ 3,570 ರೂ. ಮತ್ತು ಭತ್ತಕ್ಕೆ 2,060 ರೂ. ನಿಗದಿ ಮಾಡಲಾಗಿತ್ತು. ಕೇಂದ್ರ ಸರ್ಕಾರದ ಸಭೆ ಬಳಿಕ ಇದು ಇನ್ನು ಹೆಚ್ಚಾಗಬಹುದು ಎಂದು ಡಾ.ಬಿ.ಎಸ್.ಚಂದ್ರಶೇಖರ್ ರೈತರಿಗೆ ಮಾಹಿತಿ ನೀಡಿದರು.
8 ಸಾವಿರ ನೋಂದಣಿ: ವಿಮೆ ಯೋಜನೆಯಡಿ ಬೆಳೆ ವಿಮೆಗೆ 8 ಸಾವಿರ ರೈತರನ್ನು ನೋಂದಣಿ ಮಾಡಲಾಗಿದೆ. ಭತ್ತ, ರಾಗಿ, ಅಲಸಂದೆ, ಎಳ್ಳು, ಮುಸುಕಿನ ಜೋಳಗಳು ವಿಮೆ ವ್ಯಾಪ್ತಿಗೆ ಬರುತ್ತವೆ ಎಂದು ಮಾಹಿತಿ ನೀಡಿದರು.
ರೈತ ಸಿರಿ: ಎಲ್ಲ ರೈತರಿಗೆ ಬಿತ್ತನೆ ಮಾಡುವ ಮುನ್ನ ನಾಟಿ ಮಾಡಲು ಅನುಕೂಲವಾಗುವಂತೆ ಪ್ರತಿವರ್ಷ ರೈತ ಸಿರಿ ಯೋಜನೆಯಡಿ 250 ರೂ. ನಿಂದ 500 ರೂ. ಡೀಸೆಲ್ ನೀಡಲಾಗುತ್ತಿದೆ. ರೈತರು ಕೆವೈಸಿ ಮಾಡಿಸಿದರೆ ನೇರವಾಗಿ ಅವರ ಖಾತೆಗೆ ಹಣ ಜಮೆಯಾಗಲಿದೆ. ಈ ಸೌಲಭ್ಯವನ್ನು ಜಿಲ್ಲೆಯ ಎಲ್ಲ ರೈತರು ಪಡೆಯಬೇಕು ಎಂದರು.
ರೈತ ವಿದ್ಯಾನಿಧಿ ಉಪಯೋಗ:
ರಾಜ್ಯ ಸರ್ಕಾರ ಈ ವರ್ಷದಿಂದ ಜಾರಿಗೆ ತಂದಿರುವ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದಡಿ ಜಿಲ್ಲೆಯ 47,019 ರೈತ ಮಕ್ಕಳಿಗೆ 23.53 ಕೋಟಿ ರೂ. ವಿದ್ಯಾರ್ಥಿವೇತನ ನೀಡಲಾಗಿದೆ.
ಮೊದಲ ಹಂತದಲ್ಲಿ ದ್ವಿತೀಯ ಪಿಯುಸಿ ಮಕ್ಕಳು ಇದರ ಉಪಯೋಗ ಪಡೆದುಕೊಂಡಿದ್ದಾರೆ. ಎರಡನೇ ಹಂತದಲ್ಲಿ 8 ರಿಂದ 10, ಪ್ರಥಮ ಪಿಯುಸಿ, ವಿವಿಧ ಪದವಿ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬಹುದು. ರಾಜ್ಯದ ರೈತರ ಎಲ್ಲ ಮಕ್ಕಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಪದ್ಧತಿಯ ಮೂಲಕ ಸ್ಕಾಲರ್‌ಶಿಪ್ ತಲುಪುತ್ತದೆ. ಪ್ರಸಕ್ತ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತೆ 2500-11,000 ರೂ.ಗಳವರೆಗೆ ಶಿಷ್ಯವೇತನದ ಮೊತ್ತವನ್ನು ವಾರ್ಷಿಕ ಶಿಷ್ಯವೇತನ ರೂಪದಲ್ಲಿ ಒದಗಿಸುವ ಯೋಜನೆ ಇದಾಗಿದೆ.
ಎಫ್‌ಐಡಿ ರೈತರಿಗೆ ಮುಖ್ಯ:
ಕೃಷಿ ಇಲಾಖೆಯಿಂದ ಯಾವುದೇ ಸೌಲಭ್ಯ ಪಡೆಯಲು ರೈತರಿಗೆ ಎಫ್‌ಐಡಿ ಮುಖ್ಯವಾಗಿದೆ. ಆದ್ದರಿಂದ ಸಮೀಪದ ಕೃಷಿ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಎಫ್‌ಐಡಿ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
304 ಹೆಕ್ಟೇರ್ ಬೆಳೆ ಹಾನಿ:
ಈ ಬಾರಿಯ ಪ್ರವಾಹದಿಂದ ಜಿಲ್ಲೆಯಲ್ಲಿ 304 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ. ಈ ಪೈಕಿ 99 ಹೆಕ್ಟೇರ್ ನಂಜನಗೂಡಿನಲ್ಲಿ ಹಾನಿಯಾಗಿದೆ. ಕಬಿನಿಯಲ್ಲಿ ಹೆಚ್ಚು ನೀರು ಹರಿದ ಕಾರಣ ಬೇಸಿಗೆಯಲ್ಲಿ ಹಾಕಿದ್ದ ಭತ್ತ ಕಟಾವಿನ ಸಮಯದಲ್ಲಿ ಹಾನಿಯಾಗಿದೆ. ಈ ಸಂಬಂಧ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಈಗ ಮೊದಲ ಹಂತದಲ್ಲಿ ಜೂನ್, ಜುಲೈನಲ್ಲಿನ ಬೆಳೆ ಹಾನಿಗೆ ಪರಿಹಾರ ಹಣ ರೈತ ಖಾತೆಗೆ ನೇರವಾಗಿ ಹೋಗಿದೆ. ಜುಲೈ ಕಡೇ ವಾರ ಮತ್ತು ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿರುವ ಬೆಳೆ ಹಾನಿ ಪರಿಹಾರವನ್ನು ಸರ್ಕಾರ ಶೀಘ್ರದಲ್ಲೇ ನೀಡಲಿದೆ.
ಕರೆ ಮಾಡಿದವರು: ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಪೃಥ್ವಿರಾಜು, ಕೆ.ಆರ್.ನಗರ ತಾಲೂಕು ತಿಪ್ಪೂರಿನ ಆಕಾಶ್, ಹರದಹಳ್ಳಿ ರವಿಶಂಕರ್, ಹುಣಸೂರು ತಾಲೂಕು ಶಿವಕುಮಾರ್, ತಿ.ನರಸೀಪುರ ತಾಲೂಕು ಬನ್ನೂರಿನ ಅತ್ತಹಳ್ಳಿ ದೇವರಾಜು, ತಿ.ನರಸೀಪುರ ತಾಲೂಕು ಕಿರಗಸೂರಿನ ಪ್ರಸಾದ್‌ನಾಯಕ.