

ಹೊಸಕೋಟೆ : ಜಿಲ್ಲೆಯಲ್ಲಿ ರಸಗೊಬ್ಬರ ಕೃತಕ ಅಭಾವ ಸೃಷ್ಟಿಗೆ ಅವಕಾಶವೇ ಇಲ್ಲ, ಪ್ರತಿಯೊಂದು ದಾಸ್ತಾನು ಮಳಿಗೆಗಳಲ್ಲಿ ಪರಿಶೀಲನೆ ನಡೆಸಲಾಗುತಿದ್ದು, ಜಿಲ್ಲೆಯಲ್ಲಿ ಎಲ್ಲಿಯೂ ಗೊಬ್ಬರದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಬಸವರಾಜು ತಿಳಿಸಿದರು.
ತಾಲೂಕು ವ್ಯವಸಾಯೋತ್ಪನ್ನ ರೈತ ಸಹಕಾರ ಕೇಂದ್ರದಲ್ಲಿ ಶುಕ್ರವಾರ ಪರಿಶೀಲನೆ ನಡೆಸಿ ಮಾತನಾಡಿದ ಅವರು, ದಾಸ್ತಾನು ಮಳಿಗೆಗಳ ಸೂಚನಾ ಫಲಕದಲ್ಲಿ ಗೊಬ್ಬರ ದಾಸ್ತಾನು ವಿವರ ನಮೂದಿಸಬೇಕು, ರೈತರಿಗೆ ಗೊಬ್ಬರ ಮಾರಾಟ ಮಾಡುವಾಗ ರೈತರ ಆಧಾರ್ ಕಾರ್ಡ್ ಪರಿಶೀಲಿಸಿ ಕೃಷಿಭೂಮಿಗೆ ಅವಶ್ಯಕತೆಗೆ ಬೇಕಾದಷ್ಟನ್ನು ಮಾತ್ರ ನೀಡಬೇಕು, ಅವಶ್ಯಕತೆಗಿಂತ ಹೆಚ್ಚು ಗೊಬ್ಬರ ಖರೀದಿ ಮಾಡುವವರ ಮೇಲೆ ನಿಗಾವಹಿಸುವ ಮೂಲಕ ಗೊಬ್ಬರ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ತಾಲೂಕಿನಲ್ಲಿ ಸುಮಾರು 12 ಸಾವಿರ ಎಕರೆ ಕೃಷಿಭೂಮಿಯಿದ್ದು, ಅದರಲ್ಲಿ ನೀರಾವರಿ ಬೆಳೆಗೆ ಸುಮಾರು 6 ಸಾವಿರ ಎಕರೆ ಭೂಮಿ ಇದೆ. ಇನ್ನುಳಿದ ಭೂಮಿ ಮಳೆಯಾಶ್ರಿತವಾಗಿದೆ. ಅಲ್ಲಿ ಹೆಚ್ಚಾಗಿ ರಾಗಿ, ಜೋಳ ಬೆಳೆಯುವ ವಾಡಿಕೆಯಿದೆ, ಅದರಂತೆ ರಾಗಿ ಬೆಳೆಯ ಒಂದು ಎಕರೆ ಪ್ರದೇಶಕ್ಕೆ 50 ಕೆಜಿ ಡಿಎಪಿ ಗೊಬ್ಬರದ ಜತೆ 50 ಕೆಜಿ ಕಾಂಪೋಸ್ಟ್ ಗೊಬ್ಬರ ನೀಡಲಾಗುತ್ತಿದೆ, ಪ್ರತಿ ದಿನ ಗೊಬ್ಬರದ ದಾಸ್ತಾನು ಬಗ್ಗೆ ಸೂಕ್ತ ಕ್ರಮ ವಹಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ತಿಳಿಸಿದರು.