ಸಮಾನತೆ, ಭ್ರಾತೃತ್ವ ಇಲ್ಲದ ದೇಶಭಕ್ತಿಗೆ ಅರ್ಥವಿಲ್ಲ

26 vikram 17
Published on

ಧಾರವಾಡ: ಸ್ವಾತಂತ್ರ್ಯ ಪೂರ್ವದಲ್ಲಿದ್ದ ದಾಸ್ಯ ಭಾರತಕ್ಕೆ ಮತ್ತೊಮ್ಮೆ ಬರದಿರಲು ಎಲ್ಲರೂ ಸಹೋದರತ್ವದಿಂದ ಬಾಳುವುದು ಮುಖ್ಯ. ಭ್ರಾತೃತ್ವ ಮತ್ತು ಸಮಾನತೆ ಜತೆಗೆ ಪ್ರತಿಯೊಬ್ಬರೂ ದೇಶಭಕ್ತಿ ಹೊಂದಿರಬೇಕು. ಭ್ರಾತೃತ್ವ ಮತ್ತು ಸಮಾನತೆ ಸಂವಿಧಾನದ ಆತ್ಮ ಇದ್ದಂತೆ. ಇವೆರಡು ಇಲ್ಲದ ಸಂವಿಧಾನಕ್ಕೆ ಅರ್ಥವಿಲ್ಲ ಎಂದು ಭಾರತದ ಸಹಾಯಕ ಸಾಲಿಸಿಟರ್ ಜನರಲ್ ಅರುಣ ಜೋಶಿ ಹೇಳಿದರು.

ಇಲ್ಲಿನ ಕರ್ನಾಟಕ ವಿಶ್ವ ವಿದ್ಯಾಲಯದ ಸೆನೆಟ್ ಹಾಲ್​ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಜಾತಿ ಆಧಾರಿತ ತಾರತಮ್ಯ ಮತ್ತು ನಿಂದನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಸಮಾಜದಲ್ಲಿ ಜಾತಿ ಆಧಾರಿತ ತಾರತಮ್ಯ ಮಾಡುವವರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಬೇಕು ಎಂದರು.

ಅತಿಥಿಯಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಡಾ.ಅಂಬೇಡ್ಕರ್ ಅವರು ಸಂವಿಧಾನಲ್ಲಿ ಪ್ರತಿಯೊಬ್ಬರಿಗೆ ಮೂಲಭೂತ ಹಕ್ಕುಗಳ ಜತೆಗೆ ಕರ್ತವ್ಯಗಳನ್ನೂ ನೀಡಿದ್ದಾರೆ. ಆದರೆ ನಾವು ಹಕ್ಕುಗಳಿಗೆ ನೀಡಿದಷ್ಟು ಮಹತ್ವವನ್ನು ಕರ್ತವ್ಯಗಳಿಗೆ ನೀಡುತ್ತಿಲ್ಲ ಎಂದರು.

ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು, ಇತರರು ಇದ್ದರು. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಸುಭಾಷಚಂದ್ರ ನಾಟೀಕರ್ ಸ್ವಾಗತಿಸಿದರು, ಡಾ. ಶಾಮಲಾ ರತ್ನಾಕರ್ ನಿರೂಪಿಸಿದರು. ಮೌಲ್ಯಮಾಪನ ಕುಲಸಚಿವ ಡಾ. ರವಿಂದ್ರ ಕದಂ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net