

ಮೈಸೂರು: ವೀರ ಸಾವರ್ಕರ್ ಅವರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದವರು ಅವರ ವಿರುದ್ಧ ಕುಹಕಗಳನ್ನಾಡುತ್ತಾರೆ. ಆದರೆ ದೇಶಪ್ರೇಮಿಗಳು ತಮ್ಮ ಮನಸ್ಸಿನಲ್ಲಿರುವ ಸಾವರ್ಕರ್ ಅನ್ನು ಇನ್ನೂ ಶ್ರೀಮಂತಗೊಳಿಸಿಕೊಳ್ಳಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಸಾವರ್ಕರ್ ಪ್ರತಿಷ್ಠಾನ ಮೈಸೂರು ವತಿಯಿಂದ ಭಾನುವಾರ ಕೃಷ್ಣಮೂರ್ತಿಪುರಂನ ಬಿವಿಎಸ್ ವಿದ್ಯಾಲಯದಲ್ಲಿ ಆಯೋಜಿಸಿದ್ದ ಭಾಷಣ ಕಲಿಕಾ ವರ್ಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೀರ ಸಾವರ್ಕರ್ ಅವರು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಅಲ್ಲದೆ ಅಂಡಮಾನ್ ದ್ವೀಪದಲ್ಲಿ ಸೆರೆವಾಸ ಅನುಭವಿಸಿದರು. ದೇಶಕ್ಕಾಗಿ ಅವರು ಅನುಭವಿಸಿದ ಕಷ್ಟಗಳನ್ನು ಹಾಗೂ ಅವರ ಒಟ್ಟು ಜೀವನ ವಿಧಾನವನ್ನು ಅಧ್ಯಯನ ಮಾಡಿದರೆ ಆ ವಿಚಾರಗಳು ನಮ್ಮೊಳಗೆ ಕಿಚ್ಚು ಹೊತ್ತಿಸುತ್ತವೆ ಎಂದರು.
ಕತ್ತಲೆ ಕೋಣೆಯಲ್ಲಿದ್ದಾಗ ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಕೆಲವೊಮ್ಮೆ ಜೈಲಿನ ಕೋಣೆಯಿಂದ ಹೊರಗೆ ಬಿಟ್ಟಾಗ ಯಾರೂ ಮಾತನಾಡಲು ಸಿಗದೇ ಹೊರಗೆ ಇರುತ್ತಿದ್ದ ಮೈನಾ ಪಕ್ಷಿಗಳೊಂದಿಗೆ ಮಾತನಾಡುತ್ತಾ, ನಿನ್ನ ಮೇಲೆ ಕುಳಿತು ನನ್ನ ದೇಶವನ್ನು ಸುತ್ತಿ ಜನರನ್ನು ನೋಡಬೇಕು ಎಂದು ಭಾವುಕವಾಗಿ ಹೇಳುತ್ತಿದ್ದರು ಎಂದರು.
ಆದರೆ ಅವರಲ್ಲಿರುವ ದೇಶಭಕ್ತಿ, ದೇಶದ ಜನರನ್ನು ಕಾಣಬೇಕೆಂಬ ಆಕಾಂಕ್ಷೆಯನ್ನು ಅವರು ಈ ರೀತಿ ಭಾವನಾತ್ಮಕವಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ಅರಿಯದೇ ಕೆಲವರು ಈ ಬಗ್ಗೆ ವ್ಯಂಗ್ಯವಾಡುತ್ತಾರೆ ಎಂದು ಟೀಕಿಸಿದರು.
ಭಾಷಣ ಮಾಡುವುದು ಕೂಡ ಒಂದು ಕಲೆ. ಅದೊಂದು ರೀತಿಯಲ್ಲಿ ನಟನೆಯೂ ಆಗಿರುತ್ತದೆ. ನಟನೆ ಗೊತ್ತಿರುವವರು ಹೇಗೆ ಕಲಾವಿದರಾಗುತ್ತಾರೆಯೋ ಹಾಗೆ ಭಾಷಣ ಕಲೆ ಗೊತ್ತಿರುವವರು ಉತ್ತಮ ಭಾಷಣಕಾರನಾಗುತ್ತಾನೆ. ಹಾಗಾಗಿ ಉತ್ತಮ ಭಾಷಣಕಾರನಾಗಬೇಕು ಎಂದು ಗುರಿ ಇಟ್ಟುಕೊಳ್ಳಬೇಕು. ಜತೆಗೆ ಟೀಕೆ ಎದುರಿಸುವ, ವಿಮರ್ಶೆ ಗುಣ ಹೊಂದಿರಬೇಕು ಎಂದು ಸಲಹೆ ನೀಡಿದರು.
ಭಾಷಣ ಮಾಡುವವರು ಎಲ್ಲರನ್ನೂ ಗಮನಿಸಿಕೊಂಡು ಮಾತನಾಡಬೇಕು. ಮಾತಿನ ನಡುವೆ ವಿರಾಮ ಇರಬೇಕು. ಭಾಷಣದಲ್ಲಿ ಏರಿಳಿತ ಬೇಕು. ಸಿನಿಮಾ ನೋಡಿ ಬಂದು ಅದನ್ನು ಬೇರೊಬ್ಬರಿಗೆ ಕಣ್ಣಿಗೆ ಕಟ್ಟುವ ಹಾಗೆ ಹೇಳುವಂತೆ ನಮ್ಮ ಭಾಷಣದ ವಿಶ್ಲೇಷಣೆ ಇರಬೇಕು ಎಂದು ಸಲಹೆ ನೀಡಿದರು.
ಸಾವರ್ಕರ್ ಪ್ರತಿಷ್ಠಾನ ಮೈಸೂರು ಸಂಚಾಲಕರಾದ ರಾಕೇಶ್ ಭಟ್, ಯಶಸ್ವಿನಿ, ಆದಿತ್ಯ ಆಸ್ಪತ್ರೆ ಮಾಲೀಕ ಡಾ.ಚಂದ್ರಶೇಖರ್ ಇತರರು ಇದ್ದರು.