ನಿರಾಶ್ರಿತರ ಪರಿಹಾರ ಕೇಂದ್ರಕ್ಕಿಲ್ಲ ರಸ್ತೆ

bangarapete
Published on

ಬಂಗಾರಪೇಟೆ: ಕೋಲಾರ ಮುಖ್ಯರಸ್ತೆಯಲ್ಲಿರುವ ತಾಲೂಕಿನ ಬೀರಂಡಹಳ್ಳಿ ಗೇಟ್​ ಬಳಿಯ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೂಕ್ತ ರಸ್ತೆ ಸಂಪರ್ಕ ಸೌಲಭ್ಯವಿಲ್ಲದೆ ನಿರಾಶ್ರಿತರು, ಕೇಂದ್ರದ ಸಿಬ್ಬಂದಿ ಮತ್ತು ಸೇವಾಕರ್ತರು ಪರದಾಡುವಂತಾಗಿದೆ.

ತಾಲೂಕಿನಿಂದ ಐದು ಕಿಮೀ ಮತ್ತು ಜಿಲ್ಲಾ ಕೇಂದ್ರ ಕೋಲಾರದಿಂದ 15 ಕಿಮೀ ದೂರದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರ ಸ್ಥಾಪನೆ ಆದಾಗಿನಿಂದ ಇದುವರೆವಿಗೂ ರಸ್ತೆ ಸಂಪರ್ಕ ಇಲ್ಲ.

ಕಳೆದ 15 ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದರೂ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಕಲ್ಪಸುವಲ್ಲಿ ವಿಫಲವಾಗಿದೆ.

ನಿರಾಶ್ರಿತರ ಕೇಂದ್ರಕ್ಕೆ ಹೋಗಿ ಬರಬೇಕಾದರೆ ಬಂಗಾರಪೇಟೆ ಮತ್ತು ಕೋಲಾರ ನಡುವೆ ಚಲಿಸುವ ರೈಲಿನ ಹಳಿ ದಾಟಿ ಹೋಗಿ ಬರಬೇಕಿದೆ. ಅಧಿಕಾರಿಗಳು, ಸಿಬ್ಬಂದಿ ಹಳಿ ದಾಟಿಕೊಂಡೇ ಕೇಂದ್ರ ತಲುಪುತ್ತಿದ್ದಾರೆೆ.

ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ಕೇಂದ್ರದಿಂದ 500 ಮೀ. ದೂರ ನಡೆದುಕೊಂಡು ರೈಲ್ವೆ ಹಳಿ ದಾಟಿಯೇ ಮುಂದೆ ಬಂದು ಕೋಲಾರ ಮುಖ್ಯರಸ್ತೆಗೆ ಬರಬೇಕು. ಅಲ್ಲಿಂದ ತಮ್ಮ ಕೆಲಸಗಳಿಗೆ ಹೋಗಿ ಬರಬೇಕಾಗಿದೆ. ನಿರಾಶ್ರಿತರ ಕೇಂದ್ರಕ್ಕೆ ಗ್ಯಾಸ್​ ಸಿಲಿಂಡರ್​, ಆಹಾರ ಪದಾರ್ಥಗಳು, ಅಗತ್ಯ ವಸ್ತು ಸಾಗಿಸಲು ಎತ್ತಿಕೊಂಡು ರೈಲ್ವೆ ಹಳಿ ದಾಟಿ ಹೋಗಬೇಕು. ಕೇಂದ್ರದಲ್ಲಿ ದಾಖಲಾಗಿರುವ ನಿರಾಶ್ರಿತರಿಗೆ ಒಂದುವೇಳೆ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಆ್ಯಂಬುಲೆನ್ಸ್​ ಬರಲು ಸಾಧ್ಯವೇ ಇಲ್ಲ. ಯಾವುದಾದರೂ ವಾಹನದಲ್ಲಿ ಚಿಕಿತ್ಸೆಗೆ ಆಸ್ಪತ್ರೆಗೆ ಕೊಂಡೊಯ್ಯಲೂ ಆಗುವುದಿಲ್ಲ. ರೈಲ್ವೆಲೈನ್​ ದಾಟಿ ರಸ್ತೆಗೆ ಬಂದು ನಂತರ ಚಿಕಿತ್ಸೆಗೆ ಸಾಗಿಸಬೇಕಾದ ದುಸ್ಥಿತಿ ಎದುರಿಸುತ್ತಿದ್ದಾರೆ.

ಸಮಾಜ ಕಲ್ಯಾಣ ಜಂಟಿ ನಿರ್ದೇಶಕರ ವ್ಯಾಪ್ತಿಗೆ ನಿರಾಶ್ರಿತರ ಕೇಂದ್ರಕ್ಕೆ ಬರಲಿದ್ದು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಇತರೆ ಅಧಿಕಾರಿಗಳು , ಶಾಸಕರು, ಸಂಸದರು ಕೇಂದ್ರಕ್ಕೆ ಬಂದು ಭೇಟಿ ನೀಡಿ ಹೋಗಬೇಕೆಂದರೆ ಬಂಗಾರಪೇಟೆ ಮುಖ್ಯರಸ್ತೆಯಲ್ಲೇ ತಮ್ಮ ಕಾರುಗಳನ್ನು ನಿಲ್ಲಿಸಿ ರೈಲ್ವೆ ಲೈನ್​ ದಾಟಿಕೊಂಡು ಹೋಗಿ ಬಂದಿರುವ ಸಾಕಷ್ಟು ಉದಾಹರಣೆಗಳಿವೆ.

ನಿರಾಶ್ರಿತರು ಹೊರಗಡೆ ಬರದಂತೆ ನೋಡಿಕೊಳ್ಳಲು ಸೆಕ್ಯೂರಿಟಿ ವ್ಯವಸ್ಥೆ ಇದ್ದು, 24 ಗಂಟೆ ಕಣ್ಗಾವಲು ಸಿದ್ಧಪಡಿಸಲಾಗಿದೆ. ಒಂದೊಂದು ಸಾರಿ ನಿರಾಶ್ರಿತರು ಕೇಂದ್ರದಿಂದ ತಪ್ಪಿಸಿಕೊಳ್ಳುವ ಪ್ರಯತ್ನಗಳೂ ನಡೆದಿದೆ. ದುರಾದೃಷ್ಟವಶಾತ್​ ತಪ್ಪಿಸಿಕೊಳ್ಳುವ ಸಮಯದಲ್ಲಿ ರೈಲು ಚಲಿಸುವ ವೇಳೆ ಏನಾದರೂ ಅನಾಹುತಗಳು ನಡೆದರೆ ಯಾರು ಹೊಣೆ ಎಂಬ ಚಿಂತನೆ ಅಧಿಕಾರಿಗಳನ್ನು ಕಾಡಿಸುತ್ತಿದೆ.

ಕೇಂದ್ರ ಸ್ಥಾಪನೆಗೊಂಡಾಗ 2011ರಲ್ಲಿ ಟಿಟಿ ವಾಹನವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಈ ಹಳೇ ವಾಹನ ಕಳೆದ ಹಲವು ತಿಂಗಳಿನಿಂದ ರಿಪೇರಿಯಾಗಿರುವ ಹಿನ್ನೆಲೆಯಲ್ಲಿ ರಸ್ತೆಗಿಳಿದಿಲ್ಲ. ನಿರಾಶ್ರಿತರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಾಹನವಿಲ್ಲ, ಹಾಗಾಗಿ ಆಟೋ ಅಥವಾ ಬೈಕ್​ಗಳ ಮೇಲೆ ಕರೆದುಕೊಂಡು ಆಸ್ಪತ್ರೆಗೆ ಹೋಗಿ ಬರಬೇಕು.

ಬೈಕ್​ ಮೇಲೆ ಕರೆದುಕೊಂಡು ಹೋಗುವಾಗ ನಿರಾಶ್ರಿತರು ತಪ್ಪಿಸಿಕೊಂಡು ಓಡಿ ಹೋಗುವ ಪರಿಸ್ಥಿತಿ ಉಂಟಾಗುವುದನ್ನು ತಳ್ಳಿ ಹಾಕುವಂತಿಲ್ಲ. ಅದಕ್ಕಾಗಿಯೇ ಟಿಟಿ ವಾಹನದಲ್ಲಿ ಸೂಕ್ತ ಬಂದೋಬಸ್ತ್​ ನಿಂದ ಕರೆದುಕೊಂಡು ಹೋಗಿ ಅವರಿಗೆ ಅವಶ್ಯಕ ಇರುವ ಚಿಕಿತ್ಸೆ ಕೊಡಿಸಿ ವಾಪಸ್​ ಬರಲು ಅನುಕೂಲವಾಗಿತ್ತು. ಆದರೆ ರಿಪೇರಿಯಲ್ಲಿ ಮೆಕಾನಿಕ್​ ಶೆಡ್​ನಲ್ಲಿ ನಿಂತಿರುವ ಟಿಟಿ ವಾಹನದಿಂದ ಇತರೆ ವಾಹನಗಳಲ್ಲಿ ಹೋಗಿ ಬರಬೇಕಾದ ವಾತಾವರಣ ಉದ್ಬವವಾಗಿದೆ.

ಗ್ಯಾರೇಜ್​ ಸೇರಿದ ಟೆಂಪೋ ಟ್ರಾವೆಲ್​ ನಿರಾಶ್ರಿತರನ್ನು ಕರೆದುಕೊಂಡು ಹೋಗಿ ಬರುವ ಟೆಂಪೋ ಟ್ರಾವೆಲ್​ (ಟಿಟಿ) ವಾಹನ ಇತ್ತೀಚೆಗೆ ರಿಪೇರಿಯಾಗಿ ಚಿಕಿತ್ಸೆಗೆ ಮೆಕಾನಿಕ್​ ಗ್ಯಾರೇಜ್​ ಸೇರಿದೆ. ನಿರಾಶ್ರಿತರ ಬಗ್ಗೆ ಸಾರ್ವಜನಿಕರು ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಅಂತಹವರನ್ನ ಕರೆದುಕೊಂಡು ಬಂದು ದಾಖಲು ಮಾಡಿಕೊಳ್ಳಲು ಪರದಾಡಬೇಕಾಗಿದೆ. ಪರ್ಯಾಯವಾಗಿ ಬಾಡಿಗೆ ವಾಹನಗಳಿಗೆ ಎದುರು ನೋಡಬೇಕಾಗಿದೆ.

ನಿರಾಶ್ರಿತರ ಕೇಂದ್ರಕ್ಕೆ ಹೋಗಿ ಬರಲು ರೈಲ್ವೆ ಹಳಿ ದಾಟಿ ಹೋಗಬರಬೇಕಾಗಿದೆ. 10 ಎಕರೆ ಪ್ರದೇಶದಲರುವ ಈ ಕೇಂದ್ರಕ್ಕೆ ಸೂಕ್ತ ರಸ್ತೆ ಸಂಪರ್ಕ ಇಲ್ಲದೆ ಇರುವುದು ವಿಪರ್ಯಾಸ. ಸರ್ಕಾರ ಎಚ್ಚೆತ್ತುಕೊಂಡು ರಸ್ತೆ ಸೌಲಭ್ಯ ಕಲ್ಪಿಸಿಕೊಡುವ ಕೆಲಸ ಮಾಡಬೇಕಾಗಿದೆ. > ಕಲಾವಿದ ಯಲ್ಲಪ್ಪ ಬಂಗಾರಪೇಟೆ ನಿರಾಶ್ರಿತರ ಕೇಂದ್ರಕ್ಕೆ ಹಿರಿಯ ಅಧಿಕಾರಿಗಳು ಆಗಾಗ್ಗೆ ಬಂದು ಪರಿಶೀಲಿಸುತ್ತಾರೆ. ಅವರೂ ಸಹ ರೈಲ್ವೆ ಹಳಿಗಳನ್ನ ದಾಟಿ ಕೇಂದ್ರಕ್ಕೆ ಹೋಗಿ ಬರಬೇಕು. ಪ್ರತ್ಯಕ್ಷವಾಗಿ ಹಾಗೂ ಪ್ರಾಯೋಗಿಕವಾಗಿ ರಸ್ತೆ ಸಮಸ್ಯೆ ಕಂಡಿರುವ ಅಧಿಕಾರಿಗಳು ರಸ್ತೆ ಸಂಪರ್ಕ ಕಲ್ಪಿಸದೆ ಇರುವುದು ವಿಷಾದನೀಯ. > ಮರಗಲ್​ ಶ್ರೀನಿವಾಸ್​ ರೈತ ಮುಖಂಡ, ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net