ಕೃಷಿ ಚಟುವಟಿಕೆಗೆ ನಿರ್ಬಂಧ ಇಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ, ವಿವಿಧ ಇಲಾಖೆ ಅಧಿಕಾರಿಗಳ ಜತೆ ಕೃಷಿ ಸಚಿವರ ಸಭೆ

bc patil
Published on

ಬೆಂಗಳೂರು: ಕೃಷಿ ಚಟುವಟಿಕೆ ನಡೆಸಲು ರೈತರಿಗೆ ನಿರ್ಬಂಧ ವಿಧಿಸಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಹುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ದೇವನಹಳ್ಳಿಯಲ್ಲಿರುವ ಜಿಪಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೊನಾ ಸೋಂಕು ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನಗಳ ಸಾಗಣೆೆ, ಬೀಜ ಹಾಗೂ ಗೊಬ್ಬರಗಳ ಸರಬರಾಜು ಸೇರಿ ಕೃಷಿ ಚಟುವಟಿಕೆಗಳ ಬಗ್ಗೆ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಕೃಷಿ ಪರಿಕರ, ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲು ಕ್ರಮಕೈಗೊಳ್ಳಬೇಕು. ರಸಗೊಬ್ಬರ ಮಾರಾಟ ಅಂಗಡಿಗಳನ್ನು ತೆರೆದು ಕೃಷಿ ಪರಿಕರಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.

ಗ್ರೀನ್‌ಪಾಸ್ ದುರುಪಯೋಗ ಬೇಡ: ರೈತರಿಗೆ ಗ್ರೀನ್ ಪಾಸ್ ನೀಡುವ ವೇಳೆ ಸಂಚರಿಸುವ ಸ್ಥಳಗಳ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಬೇಕು. ರೈತರು ಗ್ರೀನ್ ಪಾಸ್‌ಗಳ ದುರುಪಯೋಗವಾಗದಂತೆ ಎಚ್ಚರವಹಿಸಬೇಕು ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

ರೈತ ಮುಖಂಡರ ಮನವಿ: ಹೂವಿನ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಇವರ ಸಹಾಯಕ್ಕೆ ಮುಂದಾಗಬೇಕಿದೆ. ದ್ರಾಕ್ಷಿ ಬೆಳೆಗಾರರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಪ್ರಸುತ್ತ ಬೆಳಗ್ಗೆ 3 ಹಾಗೂ ರಾತ್ರಿ 4 ತಾಸು ವಿದ್ಯುತ್ ಪೂರೈಕೆ ಆಗುತ್ತಿದ್ದು, ಅವಧಿಯನ್ನು ವಿಸ್ತರಿಸುವ ಮೂಲಕ ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು ಎಂದು ರೈತ ಮುಖಂಡರು ಮನವಿ ಮಾಡಿದರು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬೆಂ.ಗ್ರಾಮಾಂತರ ಜಿಪಂ ಅಧ್ಯಕ್ಷೆ ಜಯಮ್ಮಲಕ್ಷ್ಮಿನಾರಾಯಣ, ಉಪಾಧ್ಯಕ್ಷೆ ಕನ್ಯಾಕುಮಾರಿ, ಶಾಸಕರಾದ ಟಿ.ವೆಂಕಟರಮಣಯ್ಯ, ನಿಸರ್ಗ ನಾರಾಯಣಸ್ವಾಮಿ, ಡಾ. ಶ್ರೀನಿವಾಸಮೂರ್ತಿ, ಶರತ್ ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ಅಧೀಕ್ಷಕ ರವಿ.ಡಿ.ಚನ್ನಣ್ಣನವರ್ ಮತ್ತಿತರರು ಪಾಲ್ಗೊಂಡಿದ್ದರು.

ಲಾಕ್‌ಡೌನ್ ಇರುವುದರಿಂದ ಕೈಗಾರಿಕಾ ವಲಯ ಬಂದ್ ಆಗಿವೆ. ಅವುಗಳಿಗೆ ನೀಡುತ್ತಿದ್ದ ವಿದ್ಯುತ್ ಅನ್ನು ಕೃಷಿ ಚಟುವಟಿಕೆಗಳಿಗೆ ಪೂರೈಸಿ ಎಂದು ರೈತ ಪ್ರತಿನಿಧಿಗಳು ಬೇಡಿಕೆ ಸಲ್ಲಿಸಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಆದಷ್ಟು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಬಿ.ಸಿ.ಪಾಟೀಲ್, ಕೃಷಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net