

ತಿಪಟೂರು: ತಾಲೂಕಿನಲ್ಲಿ ಅಂದಾಜು 17 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬೆಳೆದಿದ್ದು, ಶೇ.80 ಫಸಲು ಬಂದಿದೆ ಎಂದು ಕೃಷಿ ಇಲಾಖೆ ಹೇಳುತ್ತಿದೆಯಾದರೂ ಶೇ.85 ರೈತರು ರಾಗಿ ಬೆಳೆದಿರುವುದಕ್ಕೆ ದಾಖಲೆಯೇ ಇಲ್ಲ.
ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ಹೊರತಾಗಿಯೂ ಕಂದಾಯ ಇಲಾಖೆ ಇಂತಹದ್ದೊಂದು ಎಡವಟ್ಟು ಮಾಡಿದ್ದು, ರಾಗಿ ಮಾರಾಟ ಮಾಡಲು ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಖರೀದಿ ಕೇಂದ್ರದ ಸವಲತ್ತು ಪಡೆಯುವಲ್ಲಿ ರೈತರು ವಂಚಿತರಾಗಿದ್ದಾರೆ.
ಕ್ವಿಂಟಾಲ್‌ಗೆ 3,150 ರೂಪಾಯಿ ಬೆಂಬಲ ಬೆಲೆ ಘೋಷಿಸಿದ ಸರ್ಕಾರ, ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಜ.9ರಂದು ಖರೀದಿ ಕೇಂದ್ರ ಸ್ಥಾಪಿಸಿದೆ. 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರು ರಾಗಿ ಬೆಳೆದಿರುವ ಜಮೀನಿನ ಪಹಣಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್‌ನೊಂದಿಗೆ ಖರೀದಿ ಕೇಂದ್ರಕ್ಕೆ ಹೋಗಿ ಮಾರಾಟ ಮಾಡಬಹುದು. ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಆದರೆ, ರೈತರು ಪಹಣಿ ತೆಗೆಸಿದರೆ ಅದರಲ್ಲಿ ರಾಗಿ ಬೆಳೆದಿರುವ ಮಾಹಿತಿಯೇ ಇಲ್ಲ. (ನೋ ಕ್ರಾಪ್ ಇನ್‌ಫಾರ‌್ಮೇಶನ್ ಎಂದು ತೋರಿಸುತ್ತಿದೆ) ಪಹಣಿಯಲ್ಲಿ ಇಂತಿಷ್ಟು ಎಕರೆಯಲ್ಲಿ ರಾಗಿ ಬೆಳೆೆಯಲಾಗಿದೆ ಎಂಬ ಮುದ್ರಿತ ಮಾಹಿತಿ ಇಲ್ಲದೆ ರಾಗಿ ಖರೀದಿ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಎಪಿಎಂಸಿ ಅಧ್ಯಕ್ಷ ಎಂ.ಬಿ.ಲಿಂಗರಾಜು ಮತ್ತು ಕಾರ್ಯದರ್ಶಿ ಎಸ್. ಬಿ.ನ್ಯಾಮಗೌಡ, ಎಸಿ ಮತ್ತು ತಹಸೀಲ್ದಾರ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕ್ರಾಪ್ ಸರ್ವೇ ಡಾಟಾದೊಂದಿಗೆ ಈಗ ರಾಗಿ ಖರೀದಿಗೆ ಪರಿಚಯಿಸಲಾಗಿರುವ ಫ್ರೂಟ್ ಸರ್ವೇ ಡಾಟಾ ಲಿಂಕ್ (ಜೋಡಣೆ) ಆಗದಿರುವುದು ಸಮಸ್ಯೆಗೆ ಕಾರಣ ಎನ್ನಲಾಗಿದೆ. ಕೃಷಿ ಇಲಾಖೆ ಡಿಡಿಯೊಂದಿಗೆ ಚರ್ಚಿಸಿ ಪರ್ಯಾಯ ವ್ಯವಸ್ಥೆಗಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಯನ್ನು ನೇಮಿಸಿದ್ದು, ಅಲ್ಲಿಗೆ ಹೋದರೆ ಸಮಸ್ಯೆ ನಿವಾರಣೆ ಆಗಲಿದೆ. ಬಿ.ಆರತಿ ತಹಸೀಲ್ದಾರ್ ರಾಗಿ ಬೆಳೆ ಮಾಹಿತಿಯೇ ಇಲ್ಲದವರನ್ನು ಫ್ರೂಟ್ ಸರ್ವೇಗೆ ಕಳಿಸಿದ್ದಾರೆ. ಪೂರ್ವ ಮುಂಗಾರು, ಅಥವಾ ಮುಂಗಾರಿನ ಅವಧಿಯಲ್ಲಿ ಸರ್ವೇ ಮಾಡಿದ್ದರೆ ರಾಗಿ ಬೆಳೆ ಕಣ್ಣಿಗೆ ಕಾಣುತ್ತಿತ್ತು. ತಪ್ಪಿನ ಅರಿವಾದ ನಂತರ ಈಗ ರಾಗಿ ಕಟಾವಾಗಿ, ಉಳಿದಿರುವ ಕೂಳೆ ಆಧಾರದಲ್ಲಿ ರಾಗಿ ಬೆಳೆದಿರುವ ಬಗ್ಗೆ ದೃಢೀಕರಿಸಲು ಮುಂದಾಗಿರುವುದು ವಿಪರ್ಯಾಸ. ಇದಕ್ಕೆ ಕಂದಾಯ ಇಲಾಖೆ ಬೇಜಾವಾಬ್ದಾರಿ ಕಾರಣ. ಎನ್.ಎಂ.ಸುರೇಶ್ ತಾಪಂ ಸದಸ್ಯ