ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ

20 ckm 5 raghupati bhat
ಚಿಕ್ಕಮಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾಜಿ ಶಾಸಕ ರಘುಪತಿ ಭಟ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on

ಚಿಕ್ಕಮಗಳೂರು: ನೈಋತ್ಯ ಪದವೀಧರ ಕ್ಷೇತ್ರಕ್ಕೆ ಕೊನೆವರೆಗೂ ತನಗೆ ಟಿಕೆಟ್ ನೀಡುವುದಾಗಿ ಹೇಳಿ ಬಳಿಕ ಬೇರೆಯವರಿಗೆ ಟಿಕೆಟ್ ನೀಡಲಾಯಿತು. ಹೀಗಾಗಿ ನಾನು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಲಹೆ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಸ್ಪರ್ಧಾ ಕಣದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿಯೂ ನನಗೆ ಉದ್ದೇಶಪೂರ್ವಕವಾಗಿ ಟಿಕೆಟ್ ತಪ್ಪಿಸಲಾಯಿತು. ಆದರೂ ನಾನು ಕ್ಷೇತ್ರದಾದ್ಯಂತ ಸಂಚಾರ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಿದ್ದೇನೆ. ಈ ವೇಳೆ ನನಗೆ ನೈಋತ್ಯ ಪದವೀಧರ ಕ್ಷೇತ್ರದ ಟಿಕೆಟ್ ನೀಡುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದರು. ಆದರೆ ಈ ಬಾರಿಯೂ ನನಗೆ ಟಿಕೆಟ್ ತಪ್ಪಿಸಲಾಗಿದೆ. ಹೀಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ ಎಂದು ತಿಳಿಸಿದರು.
ಬಿಜೆಪಿಗೆ ಸೇರ್ಪಡೆಗೊಂಡ ಒಂದುವರೆ ವರ್ಷದಲ್ಲಿಯೇ ಉದ್ಯಮಿಯಾದ ಡಾ.ಧನಂಜಯ್ ಸರ್ಜಿ ಅವರಿಗೆ ಪದವೀಧರ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಪಕ್ಷದಲ್ಲಿ 20 30 ವರ್ಷ ಕೆಲಸ ಮಾಡಿದ ಹಿರಿಯರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ನನಗೆ ಸೇರಿದಂತೆ ಯಾರಿಗೂ ಸಹ ಟಿಕೆಟ್ ನೀಡದೆ ಉದ್ಯಮಿ ಓರ್ವರಿಗೆ ಟಿಕೆಟ್ ನೀಡಲಾಗಿದೆ.ಟಿಕೆಟ್ ಪಡೆದ ಸರ್ಜಿ ಅವರು ಆಕಾಂಕ್ಷಿಗಳನ್ನು ಕನಿಷ್ಠ ಭೇಟಿ ಮಾಡುವ ಸೌಜನ್ಯವನ್ನು ತೋರಿಸಿಲ್ಲ. ಪಕ್ಷದಿಂದ ಡಾ.ಧನಂಜಯ ಸರ್ಜಿ ಅವರನ್ನು ಹೊರತುಪಡಿಸಿ ಯಾರಿಗೆ ಟಿಕೆಟ್ ನೀಡಿದ್ದರೂ ನಾನು ಚುನಾವಣೆಗೆ ಸ್ಪರ್ಧಿಸುತ್ತಿರಲಿಲ್ಲ. ಆದರೆ ಇದೀಗ ನನ್ನ ಸ್ಪರ್ಧೆ ಅನಿವಾರ್ಯವಾಗಿದೆ ಎಂದರು.
ಮೂರು ಅವಧಿಗೆ ಉಡುಪಿ ಶಾಸಕನಾಗಿದ್ದ ನಾನು ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಉಳಿದಿದ್ದೇನೆ. ಬರಡು ಬಿದ್ದಿದ್ದ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಕೇದಾರೋತ್ಥಾನ ಟ್ರಸ್ಟ್ ಮೂಲಕ ಹಚ್ಚ ಹಸುರಿನಿಂದ ಜಮೀನು ಕಂಗೊಳಿಸುವಂತೆ ಮಾಡಿದ್ದೇನೆ. ಜಿಲ್ಲಾ ಆಸ್ಪತ್ರೆ, ಬೃಹತ್ ನೀರಾವರಿ ಯೋಜನೆಗಳು, ಗ್ರಾಮೀಣ ಭಾಗದ ರಸ್ತೆಗಳು, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಜನರಿಗೆ ಅನುಕೂಲವಾಗುವಂತ ಜನಪರ ಕೆಲಸಗಳನ್ನು ಮಾಡಿ ಮಾದರಿ ಶಾಸಕನಾಗಿದ್ದೇನೆ. ಪದವೀಧರ ಕ್ಷೇತ್ರದಲ್ಲಿ ತಮ್ಮನ್ನು ಗೆಲ್ಲಿಸಿದಲ್ಲಿ ಪದವೀಧರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ನಾನು ಪದವೀಧರ ಕ್ಷೇತ್ರದಿಂದ ಪರಿಷತ್ ಸ್ಥಾನಕ್ಕೆ ಆಯ್ಕೆಯಾದ ಬಳಿಕ ಪದವಿ ಬಳಿಕ ಯುವ ಜನತೆಗೆ ಕಾಡುವ ಉದ್ಯೋಗ ಸಮಸ್ಯೆ ಪರಿಹಾರಕ್ಕೆ ನೆಟ್ವರ್ಕ್ ಡಾಟಾಬೇಸ್ ಗಳ ಸ್ಥಾಪನೆ ಮಾಡುತ್ತೇನೆ. ಸರ್ಕಾರಿ ಹುದ್ದೆಗಳ ಪರೀಕ್ಷೆ ನಡೆದ ಕಾಲಮಿತಿಯ ಒಳಗಾಗಿ ಫಲಿತಾಂಶ ಪ್ರಕಟ ಹಾಗೂ ಕ್ಷೀಪ್ರ ನೇಮಕಾತಿಗೆ ಒತ್ತಡ ಹೇರುತ್ತೇನೆ. ಪದವೀಧರರಿಗೆ ಸ್ವಉದ್ಯೋಗಕ್ಕಾಗಿ ಸಾಲ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಕೊಡಿಸಲು ಸಿಂಗಲ್ ವಿಂಡೋ ಸ್ಥಾಪನೆ, ಪದವೀಧರರಿಗೆ ಕೌಶಲ್ಯ ತರಬೇತಿ, ಸ್ಥಳೀಯ ಜಿಲ್ಲೆಗಳಲ್ಲಿ ಉದ್ಯಮ ಬಯಸುವ ಪದವೀಧರರಿಗೆ ಪೂರಕವಾಗಿ ಉದ್ಯಮ ವಲಯ ಸೃಷ್ಟಿಗೆ ಸರ್ಕಾರದ ಮೇಲೆ ಪ್ರಾಮಾಣಿಕವಾಗಿ ಒತ್ತಡ ಹೇರುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶ್ರೀಕಾಂತ್ ಪೈ, ಲಕ್ಷ್ಮೀಶ್, ಆನಂದ್, ಸುಬ್ಬರಾವ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net