

ಸಾಲಿಗ್ರಾಮ: ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಟಿಕೆಟ್ ನೀಡದಿದ್ದಕ್ಕೆ ಬೇಸರ ಇತ್ತು ಅಷ್ಟೇ. ಮತ್ತೊಮ್ಮೆ ಶಾಸಕರನ್ನಾಗಿ ಮಾಡಲು ಶ್ರಮಿಸುತ್ತೇನೆ ಎಂದು ಪಿಎಲ್‌ಡಿ ಬ್ಯಾಂಕ್ ನೂತನ ನಿರ್ದೇಶಕ ವಡ್ಡರಕೊಪ್ಪಲು ವಿ.ಆರ್.ಮಹೇಶ್ ತಿಳಿಸಿದರು.
ವಡ್ಡರಕೊಪ್ಪಲು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಮತ್ತು ಮುಖಂಡರಿಂದ ಮಂಗಳವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸುಮಾರು 40 ವರ್ಷದಿಂದ ಜೆಡಿಎಸ್ ಪಕ್ಷದಲ್ಲೇ ಇದ್ದು ಪಕ್ಷದ ಸಂಘಟನೆಗೆ ಸಹಕರಿಸಿದ್ದೇನೆ. ಹಾಗಾಗಿ ಪಿಎಲ್‌ಡಿ ಬ್ಯಾಂಕ್ ಟಿಕೆಟ್ ನೀಡುವಂತೆ ಮಾಜಿ ಶಾಸಕರನ್ನು ಮನವಿ ಮಾಡಿದ್ದೆ. ಕೆಲವು ನಮ್ಮ ಪಕ್ಷದ ಮುಖಂಡರಿಂದಲೇ ನನಗೆ ಟಿಕೆಟ್ ವಂಚನೆ ಮಾಡಿಸಿ ಸೋಲಿಸಲು ಪ್ರಯತ್ನಿಸಿದರು. ಆದರೆ ನಿಷ್ಠಾವಂತ ಕಾರ್ಯಕರ್ತರು ಮತ್ತು ನಮ್ಮ ಪಕ್ಷದ ಮತದಾರರು ನನ್ನನ್ನು ಕೈ ಬಿಡದೆ ಗೆಲ್ಲಿಸಿದ್ದಾರೆ. ಜತೆಗೆ ನನ್ನ ತಂದೆ ರಾಮೇಗೌಡರು ಈ ಹಿಂದೆ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅದು ನನಗೆ ವರದಾನವಾಗಿದೆ ಎಂದರು.
ಅವರ ಋಣ ತೀರಿಸಲು ಬ್ಯಾಂಕಿನಿಂದ ಬರುವ ಸಾಲ ಸೌಲಭ್ಯ ಮತ್ತು ಇನ್ನಿತರ ಸರ್ಕಾರಿ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವಂತಹ ಕೆಲಸ ಮಾಡುತ್ತೇನೆ. ನನ್ನ ಗೆಲುವಿಗೆ ಕಾರಣಕರ್ತರಾದ ಮತದಾರರಿಗೆ ಮತ್ತು ಗ್ರಾಮದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೋಹನ್ ಮಾತನಾಡಿ, ವಡ್ಡರಕೊಪ್ಪಲ್ ಮಹೇಶ್ ಅವರು ಟಿಕೆಟ್ ಸಿಗಲಿಲ್ಲ ಎಂದು ಬೇಸರದಿಂದ ಮಾತನಾಡಿದ್ದಾರೆ ಅಷ್ಟೇ, ನಮ್ಮ ಜೆಡಿಎಸ್ ಪಕ್ಷದಲ್ಲಿ ಅವರ ತಂದೆ ಕಾಲದಿಂದಲೂ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ತಂದೆ ಮತ್ತು ಮಗ ಮಹೇಶ್ ಕೆಲಸ ಮಾಡುತ್ತಿದ್ದಾರೆ. ನಿಷ್ಠಾವಂತ ಕಾರ್ಯಕರ್ತರನ್ನೇ ಜೆಡಿಎಸ್ ಮತದಾರರು ಆಯ್ಕೆ ಮಾಡಿದ್ದಾರೆ. ಮಹೇಶ್ ಯಾವುದೇ ಕಾರಣಕ್ಕೂ ಸಾರಾ ಮಹೇಶ್ ಬಿಟ್ಟು ಹೋಗುವುದಿಲ್ಲ ಎಂದು ತಿಳಿಸಿದರು.