

ನಾಗಮಂಗಲ: ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು. ಯಾವುದೇ ಒಂದು ಕೋಮಿಗೆ ಪ್ರಾಮುಖ್ಯ ಕೊಡುವ ಪ್ರಶ್ನೆಯೇ ಇಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಯಲ್ಲಿ ಹಾನಿಗೊಳಗಾದ ಅಂಗಡಿ-ಮುಂಗಟ್ಟುಗಳನ್ನು ವೀಕ್ಷಿಸಿ ಬಳಿಕ ತಾಲೂಕು ಆಡಳಿತಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಇಂತಹ ಘಟನೆಗೆ ಫುಲ್‌ಸ್ಟಾಪ್ ಇಟ್ಟು ಇನ್ನು ಮುಂದೆ ಇಂತಹ ಪ್ರಕರಣ ನಡೆಯದ ಹಾಗೆ ನೋಡಿಕೊಳ್ತೀನಿ. ವಿರೋಧ ಪಕ್ಷದವರು ಈ ಘಟನೆಯನ್ನು ಅವರ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳದೆ ಇದ್ದರೆ ನಾಗರಿಕರಿಗೆ ತುಂಬ ಒಳ್ಳೆಯದು ಮಾಡಿದಂತೆ. ಗಲಭೆ ಪ್ರಾರಂಭವಾಗಿದ್ದು ಆಕಸ್ಮಿಕ. ಆದರೆ ಇಷ್ಟು ಪ್ರಮಾಣದ ಹಾನಿಯಾಗುತ್ತೆ ಎಂದೂ ಯಾರಿಗೂ ತಿಳಿದಿರಲಿಲ್ಲ. ನಡೆದಿರುವ ಘರ್ಷಣೆ ಪೂರ್ವ ನಿಯೋಜಿತವೇ ಎಂಬುದರ ಕುರಿತು ತನಿಖೆ ಮಾಡಿಸಲಾಗುತ್ತದೆ. ಒಂದು ವೇಳೆ ಈ ಗಲಭೆ ಪೂರ್ವನಿಯೋಜಿತ ಎಂದು ಸಾಬೀತಾದರೆ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಬುಧವಾರ ರಾತ್ರಿ ಚರ್ಚಿಸಲಾಗಿದ್ದು, ಎಲ್ಲ ವರದಿ ಪಡೆದು ಭೇಟಿ ಮಾಡಲು ತಿಳಿಸಿದ್ದಾರೆ. ಶೀಘ್ರವೇ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ. ರಾಜ್ಯದಲ್ಲಿ ಇಂತಹ ಘಟನೆ ಜರುಗದಂತೆ ಕಟ್ಟುನಿಟ್ಟು ಮಾಡಬೇಕಿದೆ. ಹಿಂದು- ಮುಸ್ಲಿಂ ಗಲಾಟೆ ಸುಮ್ಮನೆ ಆಗುವುದಿಲ್ಲ. ಯಾರೋ ಇಂತಹ ಕೃತ್ಯವನ್ನು ಸಾರ್ವಜನಿಕರ ಮನಸ್ಸಿನಲ್ಲಿ ಬಿತ್ತುತ್ತಾರೆ. ವಿರೋಧಿಗಳು ಕಾಂಗ್ರೆಸ್ ಸರ್ಕಾರವಿದ್ದಾಗ ಮಾತ್ರ ಇಂತಹ ಘಟನೆಗಳು ಜರುಗುತ್ತವೆ ಎಂದು ಆರೊಪಿಸುತ್ತಾರೆ. ಆದರೆ ಈ ಹಿಂದೆ ಕಾಂಗ್ರೆಸ್ ಆಡಳಿತ ನಡೆಸಿದೆ. ಈ ರೀತಿಯ ಯಾವೊಂದು ಗಲಭೆಯೂ ನಡೆದಿಲ್ಲ. ಆದರೆ ಇತ್ತೀಚೆಗೆ ಇಂತಹ ಕೃತ್ಯ ನಡೆಸಲು ಕೆಲವರು ಸಾರ್ವಜನಿಕರ ಮನಸ್ಸಿನಲ್ಲಿ ಬಿತ್ತುತ್ತಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು.
ಗಲಭೆ ಬಗ್ಗೆ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಕುಮಾರಸ್ವಾಮಿ ಒಬ್ಬರು ಮಾಜಿ ಸಿಎಂ, ಕೇಂದ್ರ ಮಂತ್ರಿ ಕೂಡ ಹೌದು. ಈ ಜಿಲ್ಲೆಯ ಸಂಸದರಾಗಿರುವ ಅವರಿಗೆ, ನನಗೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ಅವರಿಗೂ ಇದೆ ಎಂದು ನಾನು ಭಾವಿಸುತ್ತೇನೆ. ಇಂತಹ ಪ್ರಕರಣಗಳನ್ನು ಶಾಂತಿಯುತ ವಾತಾವರಣಕ್ಕೆ ತರೋದು ಎಲ್ಲರ ಜವಾಬ್ದಾರಿ. ಅದರ ಹೊರತಾಗಿ ಇಂತಹ ಪ್ರಕರಣಗಳಲ್ಲೂ ರಾಜಕೀಯವಾಗಿ ಹೇಳಿಕೆ ಕೊಡುತ್ತಾರೆ ಅಂದರೆ ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಪ್ರತಿಕ್ರಿಯಿಸಿದರು.
ಈ ಪ್ರಕರಣದಲ್ಲಿ ಪೊಲೀಸ್ ವೈಫಲ್ಯ ಕಂಡು ಬಂದರೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಪೊಲೀಸ್ ವೈಫಲ್ಯದ ಬಗ್ಗೆ ವರದಿ ಕೇಳಿದ್ದೇವೆ. ಹಿಂದೆ ಯಾವುದೇ ಗಲಾಟೆ ಇಲ್ಲದಂತೆ ಕಾಂಗ್ರೆಸ್ ಸರ್ಕಾರ ನಡೆಸಿಲ್ವಾ? ಕಾಂಗ್ರೆಸ್, ಬಿಜೆಪಿ ಆಡಳಿತ ನಡೆಸಿದಾಗ ತೆಗೆದು ನೋಡಿ ಯಾವ ಸರ್ಕಾರ ಇದ್ದಾಗ ಗಲಭೆಗಳು ಹೆಚ್ಚು ಆಗಿವೆ. ನಾವು ಎಲ್ಲ ಜನರ ಪರವಾಗಿ ಸರ್ಕಾರ ನಡೆಸಿದ್ದೇವೆ, ನಡೆಸುತ್ತೇವೆ. ಈ ಗಲಭೆ ವಿಚಾರ ನನಗೆ ವೈಯಕ್ತಿಕವಾಗಿ ತುಂಬ ಬೇಸರ ತರಿಸಿದೆ. ಈ ಹಿಂದೆ ಈ ರೀತಿ ಗಲಭೆಗಳು ನಾಗಮಂಗಲದಲ್ಲಿ ನಡೆದಿವೆ. ಅಂತಹ ಸಂದರ್ಭದಲ್ಲಿ ಎರಡೂ ಕಡೆಯವರ ಜತೆ ಮಾತನಾಡಿ ಶಾಂತಿ ಸೌಹಾರ್ದತೆ ಕಾಪಾಡಿಕೊಂಡು ಬಂದಿದ್ದೆವು. ಹಾಗಾಗಿ, ಇಲ್ಲಿವರೆಗೆ ನಾಗಮಂಗಲ ಶಾಂತವಾಗಿತ್ತು. ದುರದೃಷ್ಟವಶಾತ್ ಆಗಬಾರದಿತ್ತು ನಿನ್ನೆ ಜರುಗಿದೆ. ತಕ್ಷಣ ಎಲ್ಲ ಅಧಿಕಾರಿಗಳು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಯಾವುದೇ ಪ್ರಾಣ ಹಾನಿ ಆಗದೆ ಇರೋ ಹಾಗೆ ನಿಯಂತ್ರಿಸಿದ್ದಾರೆ ಎಂದರು.
ಹಿಂದು, ಮುಸ್ಲಿಂ ಇಬ್ಬರ ಅಂಗಡಿಗಳೂ ಹಾನಿಗೊಳಗಾಗಿವೆ. ಎಷ್ಟು ಹಾನಿಯಾಗಿದೆ ಎಂದು ವರದಿ ಕೊಡಲು ತಿಳಿಸಿದ್ದೇನೆ. 20 ಅಂಗಡಿಗಳು ಸುಟ್ಟು ಹೋಗಿವೆ. ಮುಖ್ಯಮಂತ್ರಿಯೊಂದಿಗೆ ಕೂಡ ಮಾತನಾಡಿದ್ದೇನೆ. ಐಜಿ, ಎಡಿಜಿಪಿ ಸ್ಥಳದಲ್ಲೇ ಇದ್ದಾರೆ. ಈಗ ನಾಗಮಂಗಲ ಶಾಂತವಾಗಿದೆ. ಮತ್ತೆ ಇಂತಹ ವಿಚಾರ ಮರುಕಳಿಸದ ಹಾಗೆ ಪೊಲೀಸರ ನಿಯೋಜನೆ ಮಾಡಲಾಗಿದೆ. ನಾಗರಿಕರು ಆತಂಕಪಡುವಂತಿಲ್ಲ. ಸಿಎಂ ಜತೆ ಚರ್ಚಿಸಿ ಸರ್ಕಾರದಿಂದ ಪರಿಹಾರ ಕೊಡಿಸಲು ಮಾತನಾಡುತ್ತೇನೆ. ನಾನು ವೈಯಕ್ತಿಕವಾಗಿ ಪರಿಹಾರವನ್ನು ಕೂಡ ನೀಡಲಿದ್ದೇನೆ. ಸರ್ಕಾರದ ಪರಿಹಾರ ನೋಡಿಕೊಂಡು ವೈಯಕ್ತಿಕ ಪರಿಹಾರ ನೀಡುತ್ತೇನೆ ಎಂದರು.