ಸಿಎಂ ರಾಜಿನಾಮೆ ಪ್ರಶ್ನೆಯೇ ಇಲ್ಲ

mn kote
Published on

ಎಂ ಎನ್​ ಕೋಟೆ: ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಮುಂದಿನ 5 ವರ್ಷ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಶಾಸಕ ಎಸ್​.ಆರ್​.ಶ್ರೀನಿವಾಸ್​ ವಿಶ್ವಾಸ ವ್ಯಕ್ತಪಡಿಸಿದರು.

ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯ ಶೆಟ್ಟಿಹಳ್ಳಿಯಲ್ಲಿ 1 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ಜಲ್​ ಜೀವನ್​ ಮಿಷನ್​ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ,ಹಾಗಲವಾಡಿ ಕೆರೆಗೆ ನೀರು ಹರಿಸಲು ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದೆ. ಎರಡ್ಮೂರು ತಿಂಗಳಲ್ಲಿ ಕೆರೆಗೆ ನೀರು ಬಿಡಲಾಗುತ್ತದೆ ಎಂದರು.

ಮಠ ಗಂಗಯ್ಯನಪಾಳ್ಯ ಕೆರೆಗೆ ಟೆಂಡರ್​ ಕರೆಯಲಾಗಿದೆ. ಸಿಎಂ ಗಮನಕ್ಕೂ ತರಲಾಗಿದೆ. ಕೆಲ ಗೊಂದಲದಿಂದ ಟೆಂಡರ್​ ವಿಳಂಬವಾಗಿದೆ. ಸಿಎಂ ಸಭೆಯಲ್ಲಿ ಒಪ್ಪಿಗೆ ಕೊಟ್ಟ ತಕ್ಷಣ ಕೆಲಸ ಮಾಡುತ್ತೇವೆ ಎಂದರು.

ಶಾಸಕ ಮುನಿರತ್ನ ಜಾತಿ ನಿಂದನೆ, ಮಹಿಳೆಯರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ತಪ್ಪು. ಅವರ ವಿರುದ್ಧ ಕ್ರಮ ಆಗುತ್ತದೆ. ಈ ಬಗ್ಗೆ ಸಿಎಂಗೆ ದೂರು ನೀಡಿದ್ದು, ಮುಂದಿನ ದಿನಗಳಲ್ಲಿ ಶಿಕ್ಷೆಯಾಗುತ್ತದೆ ಎಂದರು.

ಹೇಮಾವತಿ ಎಕ್ಸ್​ಪ್ರೆಸ್​ ಕೆನಾಲ್​ ಕಾಮಗಾರಿಗೆ ನನ್ನ ವಿರೋಧ ಇದೆ. ಆದರೆ ಅದರ ವಿರುದ್ಧ ಯಾವುದೇ ಕಾರಣಕ್ಕೂ ಕೆಲಸ ಮಾಡಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಿಎಂಗೆ ಮನವಿ ಕೊಟ್ಟಿದ್ದೇವೆ. ಆದ್ದರಿಂದ ಸದ್ಯ ಕಾಮಗಾರಿ ತಡೆ ಹಿಡಿಯಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net