ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ: ಡಾ.ಎಚ್.ಸಿ.ಮಹದೇವಪ್ಪ

NANJANGUD-Cong-H.C. Mahadevappa-Ex Minister (2)
Published on

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಬಂದಿಲ್ಲ. ಪ್ರಶ್ನೆಯೇ ಇಲ್ಲದ ಮೇಲೆ ಬದಲಾವಣೆ ಎಲ್ಲಿಂದ ಬಂತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಶಾಸಕರು ಮುದ್ರೆ ಒತ್ತಿದ್ದಾರೆ. ಹೈಕಮಾಂಡ್ ಅದನ್ನು ನಿರ್ದೇಶಿಸಿದೆ. ಹೀಗಾಗಿ ಸಿಎಂ ತಮ್ಮ ಸ್ಥಾನದಲ್ಲಿ ಗಟ್ಟಿಯಾಗಿಯೇ ಇದ್ದಾರೆ ಎಂದರು.

ಸಿಎಂ ಬದಲಾಗುತ್ತಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅವರ ಕಥೆ ಹೇಗಿದೆ ಅಂದರೆ ‘ಆನೆ ಹೋಗುತ್ತಿತ್ತು, ನರಿ ನೋಡ್ತಾ ಇತ್ತು. ಆನೇದು ಬೀಳಲಿಲ್ಲ. ನರಿ ತಿನ್ನಲಿಲ್ಲ’ ಎಂದು ವ್ಯಂಗ್ಯ ಮಾಡಿದರು.

ದಲಿತ ಸಮಾವೇಶ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಭೆ ಸೇರಬಾರದು. ಮಾತನಾಡಬಾರದು ಎಂದು ಎಲ್ಲಿದೆ ಹೇಳಿ. ಸಮಾವೇಶ ಮಾಡುವುದಾದರೆ ಬಹಳ ಚೆನ್ನಾಗಿ ದೊಡ್ಡ ಮಟ್ಟದಲ್ಲಿ ಮಾಡಲು ಸಭೆ ಮಾಡುತ್ತೇವೆ ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಸಿದ ಅವರು, ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಚಿವ ರಾಜಣ್ಣ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಮುಡಾ ಹಗರಣದಲ್ಲಿ ಲೋಕಾಯುಕ್ತದಿಂದ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚೀಟ್ ವಿಚಾರವಾಗಿ ಪ್ರತಿಕ್ರಿಸಿದ ಅವರು, ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ತರಲು ರಾಜಕೀಯ ಪಿತೂರಿಯ ಪ್ರಕರಣ ಇದಾಗಿದೆ. ಕ್ಲೀನ್ ಚೀಟ್ ಸಿಕ್ಕಿರುವುದು ಸಂತೋಷವಾಗಿದೆ. ಪ್ರಕರಣವನ್ನು ರಾಜಕೀಯವಾಗಿ ವಿಪಕ್ಷಗಳು ಬಳಸಿಕೊಂಡಿದ್ದವು. ಸಿದ್ದರಾಮಯ್ಯ ದೋಷಿನೇ ಆಗಿರಲಿಲ್ಲ. ಹೀಗಾಗಿ ನಿರ್ದೋಷಿ ಎಂಬ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಮೊದಲಿಂದಲೂ ಗಟ್ಟಿಯಾಗಿದ್ದರು. ಈಗ ಕ್ಲೀನ್ ಚೀಟ್‌ನಿಂದ ಅವರು ಗಟ್ಟಿ ಆಗುವ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ಸಿದ್ದರಾಮಯ್ಯ ಅವರ ಆತ್ಮಸಾಕ್ಷಿ ಮೊದಲಿಂದಲೂ ತಾವು ತಪ್ಪು ಮಾಡಿಲ್ಲ ಎಂದು ಹೇಳುತ್ತಿತ್ತು. ನಮಗೂ ಸಿದ್ದರಾಮಯ್ಯ ಅವರು ತಪ್ಪು ಮಾಡಿಲ್ಲ ಎಂದು ಗೊತ್ತಿತ್ತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net