ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ

There is no question of changing the CM.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುಧೋಳದ ದಯಾನಂದ ಪಾಟೀಲರ ಗೃಹ ಕಚೇರಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. ದಯಾನಂದ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ ಇದ್ದರು.
Published on

ಮುಧೋಳ: ಮುಖ್ಯಮಂತ್ರಿಗಳ ಬದಲಾವಣೆ ವಿಷಯ ನಮ್ಮ ಮುಂದೆ ಇಲ್ಲ. ಈ ಪ್ರಶ್ನೆ ನಮ್ಮ ಹೈಕಮಾಂಡ್ ಹಾಗೂ ದೆಹಲಿ ನಾಯಕರ ಬಳಿ ಕೇಳಿದರೆ ಸೂಕ್ತ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಯಾನಂದ ಪಾಟೀಲರ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನಮಗೆ ಮಂತ್ರಿ ಪದವಿ ನೀಡಿದೆ. ಆ ಕೆಲಸವನ್ನು ನಾವು ನಿರ್ವಹಿಸುತ್ತಿದ್ದೇವೆ. ಮುಖ್ಯಮಂತ್ರಿಗಳ ಬದಲಾವಣೆ ವಿಷಯಗಳೆಲ್ಲ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರು.

ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯನ್ನು 7 ಮೀಟರ್‌ನಿಂದ 9 ಮೀಟರ್ ವಿಸ್ತರಿಸಲು ಯೋಜನೆ ಹಾಕಿಕೊಳ್ಳುತ್ತೇವೆ. ಅರಭಾವಿಯಿಂದ ಲೋಕಾಪುರವರೆಗೆ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಘಟಪ್ರಭಾ ನದಿ ನೀರು ಬಾಗಲಕೋಟೆ ಜಿಲ್ಲೆಗೆ ಸಮರ್ಪಕವಾಗಿ ಬರುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಘಟಪ್ರಭಾ ನದಿಗೆ ನೀಡುವಷ್ಟು ನೀರನ್ನು ನೀಡುತ್ತಿದ್ದೇವೆ. ಟೇಲ್ ಎಂಡ್‌ವರೆಗೆ ನೀರು ಹರಿಯಲು ಹಲವಾರು ಸಮಸ್ಯೆಗಳಿವೆ. ಕಾಲುವೆಗಳು ಹಳೆಯದಾಗಿರುವ ಕಾರಣ ಶೇ.20ರಷ್ಟು ನೀರು ಪೋಲಾಗುತ್ತಿದೆ. ಇಂತಹ ಹಲವಾರು ಸಮಸ್ಯೆಯಿಂದ ಟೇಲ್ ಎಂಡ್‌ವರೆಗೆ ನೀರು ಹೋಗುವುದಿಲ್ಲ. ಆದರೂ ಪೊಲೀಸರನ್ನು ನೇಮಿಸಿ ಭದ್ರತೆಯೊಂದಿಗೆ ಈ ಭಾಗಕ್ಕೆ ನ್ಯಾಯಯುತವಾಗಿ ನೀಡಬೇಕಾದಷ್ಟು ನೀರನ್ನು ನೀಡುತ್ತಿದ್ದೇವೆ ಎಂದರು.

ಗ್ಯಾರಂಟಿಯಿಂದ ರಾಜ್ಯದ ಅಭಿವೃದ್ಧಿಗೆ ಯಾವುದೇ ರೀತಿಯ ತೊಂದರೆ ಆಗುತ್ತಿಲ್ಲ. ಮುಧೋಳಕ್ಕೆ ಜಾಸ್ತಿ ಹಣ ನೀಡುತ್ತೇವೆ. ಕಳೆದ ಬಾರಿ 50 ಕೋಟಿ ರೂ. ಕೊಟ್ಟಿದ್ದೇವೆ ಎಂದರು.

ಕಾಂಗ್ರೆಸ್ ಮುಖಂಡರಾದ ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ಲಕ್ಷ್ಮಣ ಮಾಲಗಿ, ಉದಯ ಸಾರವಾಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net