

ಮೈಸೂರು: ಬಿಜೆಪಿಯವರು ಹಲವಾರು ಬಾರಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಮಾತನಾಡಿದ್ದಾರೆ, ಬದಲಾವಣೆ ಆಗಿದ್ಯಾ? ಬಿಜೆಪಿಯಲ್ಲಿ ಒಬ್ಬರನ್ನು ಕಂಡರೆ ಒಬ್ಬರು ಕೆಟ್ಟದಾಗಿ ಬೈಯ್ದಡಿಕೊಳ್ಳುತ್ತಿದ್ದು, ಬಿಜೆಪಿ ಸಂಪೂರ್ಣವಾಗಿ ಇಬ್ಭಾಗವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಮುಖ್ಯಮಂತ್ರಿ ಬದಲಾಗುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈ ವಿಚಾರವಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಅಶೋಕ್ ಸುಮ್ಮನೆ ಏನೇನೋ ಮಾತಾಡುತ್ತಾರೆ. ಅಶೋಕ್ ಮೊದಲು ಬಿಜೆಪಿಯ ಬಗ್ಗೆ ಗಮನ ಹರಿಸಲಿ. ಬಿಜೆಪಿ ಹಳಸಿಕೊಂಡಿದ್ದು, ಅದನ್ನು ನೋಡಿಕೊಂಡು ನಮ್ಮ ಬಗ್ಗೆ ಮಾತಾಡುತ್ತಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾನು ಗಂಟು ಮೂಟೆ ಕಟ್ಟಿದ್ದೇನೆ, ಬೆಳಗಾವಿ ಅಧಿವೇಶನಕ್ಕೆ ಹೊಸ ಮುಖ್ಯಮಂತ್ರಿ ಬರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದರು. ಆದರೆ, ಬದಲಾವಣೆ ಆಗಿದ್ಯಾ? ನನ್ನ ವಿರುದ್ಧ ಭ್ರಷ್ಟಾಚಾರದ ಅಪಪ್ರಚಾರ ಮಾಡಿದರು. ಆದರೂ ಮೂರು ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆಯಲ್ಲಿ ನಾವು ಗೆಲ್ಲಲಿಲ್ವ? ಜೆಡಿಎಸ್ ಉತ್ತರಾಧಿಕಾರಿ ಹಾಗೂ ರಾಜ್ಯಾಧ್ಯಕ್ಷನಾಗಲು ಹೊರಟ್ಟಿರುವವರನ್ನೇ ಅವರ ಕ್ಷೇತ್ರದಲ್ಲೇ ಸೋಲಿಸಿದ್ದೇವೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ. ಶಿಗ್ಗಾವಿಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕಿ ಗೆದ್ದಿದ್ದೇವೆ. ಇದು ನಮಗೆ ಜನರು ಮಾಡುತ್ತಿರುವ ಆಶೀರ್ವಾದ. ಕಾಂಗ್ರೆಸ್ ಪರವಾದ ಅಲೆ ಮುಂದೆ ಇನ್ನಷ್ಟು ಜೋರಾಗುತ್ತದೆ. ನನ್ನನ್ನು ಕಂಡರೆ ಬಿಜೆಪಿಗೆ ಭಯ, ಅದಕ್ಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಹುದ್ದೆಗೆ ಬಿ.ಆರ್. ಪಾಟೀಲ್ ರಾಜೀನಾಮೆ ನೀಡಿರುವ ಪತ್ರವನ್ನು ನಾನು ಓದಿಲ್ಲ, ಅವರೊಡನೆ ಮಾತನಾಡುತ್ತೇನೆ. ಬೆಂಗಳೂರಿನ ಕಚೇರಿಗೆ ಪತ್ರ ಬಂದಿದೆ, ನಮ್ಮ ನಡುವೆ ಯಾವುದೇ ಅಸಮಾಧಾನ ಇಲ್ಲ ಎಂದರು.