ಪಿಎಚ್.ಡಿ ಸಂಶೋಧನೆಗಳಲ್ಲಿ ಗುಣಮಟ್ಟವಿಲ್ಲ

mysore
Published on

ಮೈಸೂರು: ವಿಶ್ವವಿದ್ಯಾಲಯದಲ್ಲಿ ನಡೆಯುವ ಪಿಎಚ್.ಡಿ ಸಂಶೋಧನೆಗಳಲ್ಲಿ ಗುಣಮಟ್ಟ ಕುಸಿದೆ ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ್ ಕಳವಳ ವ್ಯಕ್ತಪಡಿಸಿದರು.


‘ಅರಿವು’ ಸಂಶೋಧನಾ ವಿದ್ಯಾರ್ಥಿ ವೇದಿಕೆ ವತಿಯಿಂದ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಬಂಧ ಮಂಡನಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ರಾಜ್ಯ ವಿವಿಗಳಲ್ಲಿ ಪ್ರತಿ ವರ್ಷ ಸಂಶೋಧನಾ ಪದವಿ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಏಕೆ ಗಂಭೀರವಾದ ಚರ್ಚೆ ಆಗುತ್ತಿಲ್ಲ? ಸಂಚಲನವನ್ನು ಉಂಟುಮಾಡುವ ಚರ್ಚೆಗಳು ಸಂಶೋಧನೆಯಲ್ಲಿ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.


ಸಂಶೋಧನೆಗಳ ಗುಣಮಟ್ಟದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ. ಸಂಶೋಧನೆಯಲ್ಲಿ ಪ್ರಾಮಾಣಿಕತೆ ಮುಖ್ಯವಾಗಿರಬೇಕು. ಸಂಶೋಧಕರಿಗೆ ಕೇಳಿಸಿಕೊಳ್ಳುವ ತಾಳ್ಮೆ ಬೇಕು. ಸಂಶೋಧನೆಯ ಗುಣಮಟ್ಟ ಕಡಿಮೆಯಾಗುತ್ತಿರುವುದನ್ನು ಮಾರ್ಗದರ್ಶಕರು ಗಮನಿಸಬೇಕಾಗಿದೆ. ತಪ್ಪುಗಳನ್ನು ಕಂಡುಹಿಡಿದು ಗುಣಮಟ್ಟ ಹೆಚ್ಚಿಸುವ ಕೆಲಸವನ್ನು ಮಾಡಬೇಕಿದೆ ಎಂದು ಸಲಹೆ ನೀಡಿದರು.


ಬೌದ್ಧ ಧರ್ಮಗಳಲ್ಲಿಯೂ ದಾಸೋಹದ ಪರಿಕಲ್ಪನೆ ಉಲ್ಲೇಖ ಸಿಗುತ್ತದೆ. ಹಸಿದವನಿಗೆ ಧರ್ಮ ಬೋಧಿಸಬೇಡಿ ಎಂದು ಬುದ್ಧ ಹೇಳುತ್ತಾರೆ. ಎಲ್ಲರಿಗೂ ಊಟ ಹಾಕುವ ಕ್ರಿಯೆಯೂ ದಾಸೋಹವಲ್ಲ. ಸಿದ್ದರಾಮನ ವಚನಗಳಲ್ಲಿ ದಾಸೋಹ ಪರಿಕಲ್ಪನೆ ವಿಷಯ ಮಂಡನೆಯಲ್ಲಿ ಕೆಲವು ಸಂಶೋಧನಾತ್ಮಕ ಸುಳಿವುಗಳು ಇವೆ. ಇಂತಹವುಗಳ ಮೇಲೆ ಸಂಶೋಧನೆ ಹೆಚ್ಚಾಗಿ ನಡೆಯಬೇಕಿದೆ ಎಂದರು.


ಸಂಪತ್ತಿನ ಕ್ರೂಢೀಕರಣದಿಂದ ಶೋಷಣೆ ಸೃಷ್ಟಿಯಾಗುತ್ತದೆ. ಇದನ್ನೇ ಆಯ್ದಕ್ಕಿ ಲಕ್ಕಮ್ಮ ಹೇಳೋದು. ಈ ರೀತಿಯ ವಿಷಯಗಳ ಮೇಲೆ ಸಂಶೋಧನೆ ನಡೆದರೆ ಮೌಲ್ಯಯುತ ಸಂಶೋಧನೆಗಳು ಹೊರಹೊಮ್ಮುತ್ತವೆ. ಜತೆಗೆ ಬುದ್ಧನ ಪಂಚಶೀಲ ತತ್ವದಲ್ಲಿ ದಾಸೋಹ ಪರಿಕಲ್ಪನೆ ಇದೆ. ವಚನಗಳಲ್ಲಿ ದಾಸೋಹ ಪರಿಕಲ್ಪನೆ ದೊಡ್ಡದಿದೆ. ಇಂತಹವುಗಳನ್ನು ಸಂಶೋಧನೆ ಮೂಲಕ ಗಮನಿಸಬೇಕಿದೆ ಎಂದು ಹೇಳಿದರು.


ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳನ್ನು ವಿಚಾರಗಳ ಮೂಲಕ ಮುಖಾಮುಖಿ ಮಾಡಬೇಕಿದೆ. ಈ ಮೂಲಕ ಅಧ್ಯಯನ ವಿಸ್ತಾರ ಮಾಡಿಕೊಳ್ಳಬೇಕು. ಇದು ಎಲ್ಲ ವಿವಿಗಳಲ್ಲೂ ನಡೆಯಬೇಕಿದೆ. ಇದು ವಿದ್ಯಾರ್ಥಿಗಳಿಗೆ ಇರಬೇಕಾದ ಶಿಸ್ತು ಎಂದು ತಿಳಿಸಿದರು.


ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ ಮಾತನಾಡಿ, ಕತ್ತಲೆಯಲ್ಲಿ, ಸಮಸ್ಯೆಯಲ್ಲಿ ಸಂಶೋಧನೆಗಳು ನಡೆಯಬೇಕೇ ಹೊರತು ಬೆಳಕಲ್ಲಿ ನಡೆಯುವುದು ಸರಿ ಕಾಣುವುದಿಲ್ಲ. ಕಲಿತ ಫಲ ನಿಧಾನಕ್ಕೆ ಅರ್ಥ ಆಗುತ್ತದೆ. ಕಲಿಕೆ ಮುಖ್ಯವಾಗಿದೆ. ಜಂಗಮ, ದಾಸೋಹ ಸಂಬಂಧಿತ ಪ್ರಶ್ನೆಗಳಿಗೆ ಸಮಾಜದಲ್ಲಿ ಉತ್ತರ ಸಿಗಬೇಕಿದೆ ಎಂದರು.


ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ಎಸ್.ನಟರಾಜ್ ಅವರು ‘ಸಿದ್ದರಾಮನ ವಚನಗಳಲ್ಲಿ ದಾಸೋಹ ಪರಿಕಲ್ಪನೆ’, ಮತ್ತೊಬ್ಬ ಸಂಶೋಧನಾ ವಿದ್ಯಾರ್ಥಿ ಕೆ.ಸಿ.ಲೋಹಿತ್ ಅವರು ‘ಕನ್ನಡ ಕಾವ್ಯಗಳ ಹಿನ್ನೆಲೆಯಲ್ಲಿ ಚೌಪದಿಯ ಸ್ವರೂಪ’ ವಿಷಯ ಮಂಡಿಸಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಭಾಗದ ಅಧ್ಯಾಪಕರಾದ ಡಾ.ಎಸ್.ರೇಣುಕಾ, ಡಾ.ಎಚ್.ಎಲ್.ವರದರಾಜನ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net