ರಾಣೆಬೆನ್ನೂರಿನಲ್ಲಿಲ್ಲ ಸಾರ್ವಜನಿಕ ಶೌಚಗೃಹ

Toilet
Published on

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

ವಾಣಿಜ್ಯ ನಗರಿ ರಾಣೆಬೆನ್ನೂರಿಗೆ ನಿತ್ಯವೂ ಲಕ್ಷಾಂತರ ಜನ ಬಂದು ಹೋಗುತ್ತಾರೆ. ಜನದಟ್ಟಣೆ ಇರುವ ರೈಲು ನಿಲ್ದಾಣ-ಬಸ್ ನಿಲ್ದಾಣ ಪ್ರಮುಖ ರಸ್ತೆಯಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಗೃಹ ಇಲ್ಲದಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ತಂದೊಡ್ಡಿದೆ.

ಇಲ್ಲಿಯ ರಂಗನಾಥ ನಗರದ ಬಳಿ ರೈಲು ನಿಲ್ದಾಣವಿದೆ. ಇಲ್ಲಿಂದ 2 ಕಿ.ಮೀ. ನಷ್ಟು ದೂರದ ಬಸ್ ನಿಲ್ದಾಣದವರೆಗೆ ನಗರದ ಪ್ರಮುಖ ರಸ್ತೆಯಿದೆ. ಈ ಮಾರ್ಗದಲ್ಲಿ ನಗರಸಭೆ, ಸರ್ಕಾರಿ ಪಶುಪಾಲನಾ ಆಸ್ಪತ್ರೆ, ಸರ್ಕಾರಿ ಹೆರಿಗೆ ಹಾಗೂ ಮಹಿಳೆಯರ ಆಸ್ಪತ್ರೆ, ಬಿಜೆಪಿ ಕಾರ್ಯಾಲಯ, ಮುಖ್ಯ ಅಂಚೆ ಕಚೇರಿ, ಬಿಎಸ್​ಎನ್​ಎಲ್ ಕಚೇರಿ, ತಾಪಂ ಸೇರಿ ಪ್ರಮುಖ ಸರ್ಕಾರಿ ಕಚೇರಿಗಳಿವೆ. ಇದೇ ಮಾರ್ಗದಲ್ಲಿ ಎಂ.ಜಿ. ರಸ್ತೆ, ನೆಹರು ಮಾರುಕಟ್ಟೆ, ಶಹರ ಪೊಲೀಸ್ ಠಾಣೆ ಸೇರಿ ಪ್ರಮುಖ ಸರ್ಕಾರಿ ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ಜನತೆ ಸಂಚರಿಸುತ್ತಾರೆ. ಇಂತಹ ಸ್ಥಳದಲ್ಲಿ ಸಾರ್ವಜನಿಕರಿಗೆ ಶೌಚಗೃಹದ ಅವಶ್ಯಕತೆ ಅಧಿಕವಾಗಿದೆ. ಆದರೆ, ಈ ಮಾರ್ಗದಲ್ಲಿ ಈವರೆಗೂ ನಗರಸಭೆ ಸಾರ್ವಜನಿಕ ಶೌಚಗೃಹ ನಿರ್ವಿುಸದಿರುವುದು ವಿಪರ್ಯಾಸವೇ ಸರಿ.

ವಿದ್ಯಾರ್ಥಿನಿಯರಿಗೆ ಸಂಕಷ್ಟ: ಈ ರಸ್ತೆ ಮಾರ್ಗವಾಗಿ ಮಹಿಳಾ ಕಾಲೇಜ್ ಇರುವುದರಿಂದ ನಿತ್ಯವೂ ಸಾವಿರಾರು ವಿದ್ಯಾರ್ಥಿನಿಯರು ಓಡಾಡುತ್ತಾರೆ. ಆದರೆ, ಅವರಿಗೆ ಶೌಚಕ್ಕೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲ. ಹೋಟೆಲ್​ಗಳಿಗೆ ಹೋಗಬೇಕಾದರೆ ಏನಾದರೂ ತಿಂಡಿ ತಿಂದರೆ ಹೋಟೆಲ್​ನವರು ಸುಮ್ಮನಿಸುತ್ತಾರೆ. ಇಲ್ಲವಾದರೆ ಶೌಚಗೃಹಕ್ಕೆ ಹಾಕಿದ ಬೀಗ ತೆಗೆಯುವುದಿಲ್ಲ. ಕಾರಣ ವಿದ್ಯಾರ್ಥಿನಿಯರು, ಮಹಿಳೆಯರು ಪರದಾಡುತ್ತಿದ್ದಾರೆ.

ಪುರುಷರೊಂದಿಗೆ ವಾಗ್ವಾದ

ಪ್ರಮುಖ ಮಾರ್ಗದಲ್ಲಿ ಸೂಕ್ತ ಸ್ಥಳವಿಲ್ಲದ ಕಾರಣ ಪುರುಷರು ಕಂಡಕಂಡಲ್ಲಿ ಗೋಡೆಗಳಿಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದನ್ನು ಕಂಡು ಅಕ್ಕಪಕ್ಕದ ಅಂಗಡಿಕಾರರು ಜನರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಈ ರಸ್ತೆಯಲ್ಲಿ ಮೂತ್ರ ವಿಸರ್ಜನೆ ವಿಚಾರಕ್ಕೆ ಗಲಾಟೆಗಳು ನಡೆದಿವೆ.

ಇರುವ ಶೌಚಗೃಹಕ್ಕೆ ಬೀಗ

ಈ ರಸ್ತೆ ಮಾರ್ಗದ ತಾಪಂ ಎದುರಿನ ನಗರಸಭೆ ವಾಣಿಜ್ಯ ಕಟ್ಟಡದಲ್ಲಿ ಮೂತ್ರ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಅದರ ನಿರ್ವಹಣೆ ಸಮರ್ಪಕವಾಗಿರದೇ ದುರ್ನಾತ ಹರಡುತ್ತಿತ್ತು. ಇದರಿಂದ ಅಕ್ಕಪಕ್ಕದ ವ್ಯಾಪಾರಸ್ಥರಿಗೆ ಸಮಸ್ಯೆಯಾಯಿತು. ಹೀಗಾಗಿ, ಕಳೆದ ಒಂದು ವರ್ಷದಿಂದ ಬೀಗ ಜಡಿಯಲಾಗಿದೆ.

ಪಟ್ಟಣದಲ್ಲಿ ಸಾರ್ವಜನಿಕರಿಗೆ ಶೌಚಗೃಹದ ವ್ಯವಸ್ಥೆ ಇಲ್ಲದಿರುವುದರಿಂದ ತೀವ್ರ ತೊಂದರೆ ಉಂಟಾಗುತ್ತಿದ್ದು, ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕ ಶೌಚಗೃಹ ನಿರ್ವಿುಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ರಾಣೆಬೆನ್ನೂರ ವೇಗವಾಗಿ ಬೆಳೆಯುತ್ತಿರುವ ನಗರ. ನಗರಸಭೆಯವರು ಸಾರ್ವಜನಿಕರಿಗೆ ಎಲ್ಲ ಸೌಲಭ್ಯ ಕಲ್ಪಿಸಬೇಕು. ಆದರೆ, ಪ್ರಮುಖ ರೈಲು ನಿಲ್ದಾಣದಿಂದ ಬಸ್ ನಿಲ್ದಾಣದ ರಸ್ತೆಯವರೆಗೂ ಸಾರ್ವಜನಿಕರ ಶೌಚಗೃಹ ಇಲ್ಲದಿರುವುದು ದುರ್ದೈವದ ಸಂಗತಿ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. | ಬದ್ರಿನಾಥ ನಾಯಕ, ಸ್ಥಳೀಯ ನಿವಾಸಿ ರೈಲು ನಿಲ್ದಾಣದಿಂದ ಬಸ್ ನಿಲ್ದಾಣದವರೆಗಿನ ರಸ್ತೆಯಲ್ಲಿ ಸರ್ಕಾರಿ ಜಾಗ ದೊರೆತರೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಸಾರ್ವಜನಿಕ ಶೌಚಗೃಹ ನಿರ್ವಿುಸಲಾಗುವುದು. | ನಿಂಗಪ್ಪ ಕುಮ್ಮಣ್ಣನವರ, ನಗರಸಭೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net