ಶೌಚಗೃಹಕ್ಕಿಲ್ಲ ಲೋಕಾರ್ಪಣೆ ಭಾಗ್ಯ

11111
Published on

ಜಿ.ನಾಗರಾಜ್​ ಬೂದಿಕೋಟೆ

ಬೂದಿಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಿರ್ಮಿಸಿರುವ ಶೌಚಗೃಹಕ್ಕೆ ಕಳೆದ 2 ವರ್ಷಗಳಿಂದ ಲೋಕಾರ್ಪಣೆ ಭಾಗ್ಯವಿಲ್ಲದೆ ರೋಗಿಗಳು ಬಯಲಿನಲ್ಲಿ ಶೌಚಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ.

ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮ ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನರ ಅನುಕೂಲಕ್ಕಾಗಿ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಿದೆ. ಕೇಂದ್ರದಲ್ಲಿ ದಿನದ 24 ಗಂಟೆಗಳ ಹೆರಿಗೆ ಸೇರಿ ಪ್ರಾಥಮಿಕ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ನಿತ್ಯ ಹತ್ತಾರು ಗ್ರಾಮಗಳಿಂದ ಗ್ರಾಮಸ್ಥರು, ಸಾರ್ವಜನಿಕರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಚಿಕಿತ್ಸೆಗಾಗಿ ಬರುವ ರೋಗಿಗಳು ಸೇರಿ ಸಾರ್ವಜನಿಕರ ಅನುಕೂಲಕ್ಕಾಗಿ ಆಸ್ಪತ್ರೆ ಆವರಣದಲ್ಲಿ 2021&22ನೇ ಸಾಲಿನ 15ನೇ ಹಣಕಾಸು ಅನುದಾನದಲ್ಲಿ 3 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಿಸಲಾಗಿದೆ. ಅದರ ನಿರ್ವಹಣೆ ಎಇಇ ಆರ್​ಡಿಡಬ್ಲೂಸ್​ ಉಪವಿಭಾಗಕ್ಕೆ ನೀಡಲಾಗಿದೆ. ಕಾಮಗಾರಿ ಪೂರ್ಣಗೊಂಡು 2 ವರ್ಷ ಕಳೆದರೂ ಶೌಚಗೃಹ ಲೋಕಾರ್ಪಣೆ ಮಾಡಲು ಯಾರೂ ಮುಂದಾಗದೇ ಇರುವುದರಿಂದ ಕಟ್ಟಡದ ಸುತ್ತಲೂ ಬೇಲಿ ಆವರಿಸಿಕೊಂಡಿದೆ. ಇದರಿಂದಾಗಿ ಆಸ್ಪತ್ರೆಗೆ ಬರುವವರು ಬಯಲಿಗೆ ಹೋಗಬೇಕಾದ ಅನಿವಾರ್ಯ ನಿರ್ಮಾಣವಾಗಿದೆ.

ಆಸ್ಪತ್ರೆಯ ಆವರಣದಲ್ಲಿ ಸಂ&ಸಂಸ್ಥೆಗಳ ಸಹಕಾರದಿಂದ ಗಿಡಗಳನ್ನು ನೆಟ್ಟು ಪೋಷಿಸಲಾಗಿದ್ದು, ಉತ್ತಮ ವಾತವರಣವಿದೆ. ಆದರೆ ಕಟ್ಟಡದ ಸುತ್ತಲೂ ಗಿಡ&ಗಂಟಿಗಳು ಬೆಳೆದು ನಿಂತಿದ್ದು, ತೆರವುಗೊಳಿಸದ ಕಾರಣ ಕ್ರಿಮಿಕೀಟಗಳ ವಾಸಕ್ಕೆ ಅನುವು ಮಾಡಿಕೊಟ್ಟಂತಾಗಿದೆ. ಆಸ್ಪತ್ರೆಗೆ ಬರುವಂತಹ ರೋಗಿಗಳು ಮತ್ತು ಸಿಬ್ಬಂದಿಗೆ ಆಗಾಗ ಹಾವುಗಳು ಕಾಣಿಸಿಕೊಳ್ಳುವುದು

ಸಾಮಾನ್ಯವಾಗಿದೆ. ಈ ಹಿಂದೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಂ&ಸಂಸ್ಥೆಯವರು ಆಗಾಗ ಬಂದು ಆಸ್ಪತ್ರೆಯ ಆವರಣವನ್ನು ಸ್ವಚ್ಛ ಮಾಡುತ್ತಿದ್ದರು. ಇದೀಗ ಸ್ವಚ್ಛತೆಗೆ ಯಾರೂ ಮುಂದಾಗದ ಕಾರಣ ಎಲ್ಲಿ ನೋಡಿದರೂ ಗಿಡ&ಗಂಟಿ ಬೆಳೆದು ಕಾಡಿನಂತಾಗಿದೆ. ಅಧಿಕಾರಿಗಳಿಗೆ ಮನವಿ ಮಾಡಿದರೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬುದು ಆಸ್ಪತ್ರೆ ಸಿಬ್ಬಂದಿಗಳ ಆರೋಪ. ಪಂಚಾಯಿತಿಯವರಾಗಲಿ ಅಥವಾ ಆರೋಗ್ಯ ಇಲಾಖೆಯವರಾಗಲಿ ಕನಿಷ್ಠ 15 ದಿನಕ್ಕೆ ಒಮ್ಮೆ ಆವರಣದಲ್ಲಿ ಬೆಳೆಯುವ ಗಿಡ&ಗಂಟಿ ತೆರವು ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ನೀರಿನ ಸಂಪರ್ಕವೇ ಇಲ್ಲ

ಶೌಚಗೃಹ ನಿರ್ಮಿಸಿ ನೀರಿನ ಸಂಪರ್ಕ ಕಲ್ಪಿಸದೇ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ ಎಂಬ ಆರೋಪವೂ ಇದೆ. ಇದರಿಂದ ಲಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಶೌಚಗೃಹ ಬಳಕೆಯಾಗದ ಪರಿಣಾಮ ಸರ್ಕಾರದ ಹಣ ವ್ಯರ್ಥವಾಗುತ್ತಿದೆ. ಆದ್ದರಿಂದ ನೀರಿನ ಸಂಪರ್ಕ ಕಲ್ಪಿಸಿ ಶ್ರೀ ಶೌಚಗೃಹ ಬಳಕೆಗೆ ಮುಕ್ತಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಗುತ್ತಿಗೆದಾರರು ಶೌಚಾಲಯದ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸಿ ಆಸ್ಪತ್ರೆಯ ಸಿಬ್ಬಂದಿಗೆ ಹಸ್ತಾಂತರ ಮಾಡಿದ್ದಾರೆ. ನೀರಿನ ಸಂಪರ್ಕವನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಪಂಚಾಯಿತಿ ಆವರಣದಲ್ಲಿ ಈ ಹಿಂದೆ ಸ್ವಚ್ಚ ಮಾಡಲಾಗಿದೆ.

- ಬಿ.ಆರ್​ ಮಂಜುನಾಥ, ಗ್ರಾಪಂ ಅಧ್ಯಕ್ಷ ಬೂದಿಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net