ಏಕರೂಪ ನಾಗರಿಕ ಸಂಹಿತೆ ಜಾರಿಗೆ ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ: ದೇವೇಗೌಡ

devegowda
Published on

ಮೈಸೂರು: ಏಕರೂಪ ನಾಗರಿಕ ಸಂಹಿತೆ ಜಾರಿಗೆ ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ. ಆದ್ದರಿಂದ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವುದು ಅಸಾಧ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಿಂದ ಬಿಜೆಪಿಗೆ ಲಾಭ ನಷ್ಟದ ಪ್ರಶ್ನೆಯಲ್ಲ. ಇದನ್ನು ಜಾರಿ ಮಾಡಲು ಹೊರಟರೆ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ. ನಮ್ಮ ಸಂವಿಧಾನದಲ್ಲಿ ಏನಿದೆಯೋ ಅದಕ್ಕೆ ನಾವು ಬದ್ಧರಾಗಿರಬೇಕು. ಹಾಗಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ನನ್ನ ವಿರೋಧವಿದೆ ಎಂದರು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅವಕಾಶ ಕೊಡದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಮುದ್ರಕ್ಕೆ ಹರಿದು ಹೋಗುವ ನೀರು ಬಳಸಲು ತಮಿಳುನಾಡು ಸರ್ಕಾರಕ್ಕೆ ಅನುಮತಿ ಕೊಟ್ಟಿದ್ದಾರೆ. ಸೇಲಂ ಜಿಲ್ಲೆ ಸೇರಿದಂತೆ ಆಸುಪಾಸಿನ ಜಿಲ್ಲೆಗಳ 4 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಬಳಕೆ ಮಾಡಲಾಗುತ್ತಿದೆ. ತಮಿಳುನಾಡಿನ ಎಐಎಡಿಎಂಕೆ ಪಕ್ಷದೊಂದಿಗೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ.

ಮುಂದಿನ ದಿನಗಳಲ್ಲಿ ಎಐಎಡಿಎಂಕೆಗೆ ಅನುಕೂಲವಾಗಲಿ ಅಂತಾನೇ ಅಲ್ಲಿನ ನೀರಾವರಿ ಯೋಜನೆಗೆ ಮೋದಿ ಅನುಮತಿ ಕೊಟ್ಟಿದ್ದಾರೆ. ಈ ವಿಚಾರವನ್ನು ಇಲ್ಲಿಗೇ ಬಿಡುವುದಿಲ್ಲ. ಮೇಕೆದಾಟು ವಿಚಾರವಾಗಿ ಬಹಳ ಹಿಂದೆಯೇ ಪ್ರಧಾನಿಗೆ ಪತ್ರ ಬರೆದಿದ್ದೆ.
ಆ ಪತ್ರಕ್ಕೆ ಇಲ್ಲಿಯ ತನಕ ಪ್ರತಿಕ್ರಿಯೆ ನೀಡಿಲ್ಲ. ಮುಂಬರುವ ರಾಜ್ಯಸಭೆ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇನೆ ಎಂದು ಪ್ರಧಾನಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net