ಕೆ.ಎಂ.ದೊಡ್ಡಿ ತಾಲೂಕು ರಚನೆಗೆ ಪ್ರಸ್ತಾವನೆ ಸ್ವೀಕೃತವಾಗಿಲ್ಲ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ

mysore
Published on

ಮಂಡ್ಯ: ಮದ್ದೂರು ತಾಲೂಕು ಕೆ.ಎಂ.ದೊಡ್ಡಿಯನ್ನು ತಾಲೂಕು ಕೇಂದ್ರವನ್ನಾಗಿ ರಚಿಸುವ ಕುರಿತು ಮಂಡ್ಯ ಜಿಲ್ಲಾಧಿಕಾರಿ ಅವರಿಂದ ಪ್ರಸ್ತಾವನೆ ಸ್ವೀಕೃತಗೊಂಡಿರುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಜನಸಂಖ್ಯೆ, ಶಿಕ್ಷಣ, ವಾಣಿಜ್ಯ ದೃಷ್ಟಿಯಿಂದ ಹೆಚ್ಚಿನ ಬೆಳವಣಿಗೆ ಕಂಡು ವೇಗವಾಗಿ ಬೆಳೆಯುತ್ತಿರುವ ಕೆ.ಎಂ.ದೊಡ್ಡಿಯನ್ನು ತಾಲೂಕು ಕೇಂದ್ರವನ್ನಾಗಿ ರಚಿಸುವ ಕುರಿತು ವಿಧಾನ ಪರಿಷತ್ ಸದಸ್ಯ ಮಧು ಬಿ.ಮಾದೇಗೌಡರು ವಿಧಾನ ಪರಿಷತ್‌ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಸಚಿವರು, ಹೊಸ ಜಿಲ್ಲೆ ಮತ್ತು ತಾಲೂಕು ರಚನೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ/ ಮನವಿಗಳು ಸ್ವೀಕೃತವಾಗಿವೆ. ಈ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಆದರೆ, ಕೆ.ಎಂ.ದೊಡ್ಡಿಯನ್ನು ತಾಲೂಕು ಕೇಂದ್ರವನ್ನಾಗಿ ರಚಿಸುವ ಕುರಿತು ಪ್ರಸ್ತಾವನೆ ಬಂದಿಲ್ಲ ಎಂದು ಉತ್ತರಿಸಿದ್ದಾರೆ.

ಹೊಸದಾಗಿ ತಾಲೂಕುಗಳನ್ನು ರಚಿಸಲು ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಿರುವುದಿಲ್ಲ. ಭೌಗೋಳಿಕ ಹಿನ್ನೆಲೆ, ಆಡಳಿತಾತ್ಮಕ ಅಗತ್ಯತೆ ಹಾಗೂ ಸಾರ್ವಜನಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿಯಿಂದ ಸ್ವೀಕೃತವಾಗುವ ಪ್ರಸ್ತಾವನೆಗಳನ್ನು ಪರಿಶೀಲಿಸಲಾಗುವುದು ಎಂದಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ನೂತನ ಜಿಲ್ಲೆ ಮತ್ತು ತಾಲೂಕುಗಳನ್ನು ಸೃಜಿಸಲು ಸರ್ಕಾರ ಉದ್ದೇಶಿಸಿರುವುದಿಲ್ಲ ಎಂದೂ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net