ಪ್ರವಾಹ ಸಮಿತಿ ಭೇಟಿಯಿಂದ ಮಹದಾಯಿ ಯೋಜನೆಗೆ ಇಲ್ಲ ಸಮಸ್ಯೆ

New Joshi 123
Published on

ಹುಬ್ಬಳ್ಳಿ : ಮಹದಾಯಿ ಪ್ರವಾಹ ಸಮಿತಿಯು ಯೋಜನಾ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಇದಕ್ಕೆ ಬೇರೆ ಅರ್ಥ ಕೊಡಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟ್ರಿಬ್ಯುನಲ್ ಆದ ಯೋಜನೆಗೆ ಸಮಿತಿ ನೇಮಕ ಮಾಡಲಾಗುತ್ತದೆ. ಅದೇ ರೀತಿ, ಮಹದಾಯಿ ಯೋಜನೆಗೂ ಸಮಿತಿ ನೇಮಿಸಲಾಗಿದೆ ಎಂದರು.

ಮಹದಾಯಿ ವ್ಯಾಪ್ತಿಯಲ್ಲಿ ಯಾವ ರೀತಿಯ ಚಟುವಟಿಕೆ ನಡೆದಿವೆ ಎಂಬುದನ್ನು ಸಮಿತಿ ಅಧ್ಯಯನ ಮಾಡುತ್ತದೆ. ಈ ಸಮಿತಿ ಕೇಂದ್ರಕ್ಕೆ ವರದಿ ನೀಡುವುದಿಲ್ಲ. ಗೋವಾ ಮುಖ್ಯಮಂತ್ರಿ ಅವರ ಮನವಿ ಮೇರೆಗೆ ಈ ಸಮಿತಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡುತ್ತಿಲ್ಲ. ಇದೊಂದು ಸಾಮಾನ್ಯ ಪ್ರಕ್ರಿಯೆ ಅಷ್ಟೇ ಎಂದು ತಿಳಿಸಿದರು.

ಪ್ರವಾಹ ಸಮಿತಿ ಭೇಟಿಯಿಂದ ಕರ್ನಾಟಕಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ಈಗಾಗಲೇ ಕೇಂದ್ರ ಕೊಟ್ಟಿರುವ ಡಿಪಿಎಆರ್ ಅನುಮತಿಗೂ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮಹದಾಯಿ ಯೋಜನೆಯ ಡಿಪಿಆರ್​ಗೆ ಈಗಾಗಲೇ ಕೇಂದ್ರ ಸರ್ಕಾರ ಅನುಮತಿ ನೀಡಿದೆ. 52 ಹೆಕ್ಟರ್ ಪ್ರದೇಶದ ದಟ್ಟ ಅರಣ್ಯದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಅನುಮತಿ ಬೇಕಿದೆ ಎಂದರು. ಟೈಗರ್ ಕಾರಿಡಾರ್​ನಲ್ಲಿ ಯೋಜನೆಗೆ ಅನುಮತಿ ಅಗತ್ಯ. ವನ್ಯಜೀವಿ ಮಂಡಳಿ ಅನುಮತಿ ಸಿಕ್ಕರೆ ಯೋಜನೆ ಕಾಮಗಾರಿ ಆರಂಭಗೊಳ್ಳುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net