ಸೊರಟೂರಲ್ಲಿ ಕೊಳಚೆ ನೀರಿಗಿಲ್ಲ ಶಾಶ್ವತ ಪರಿಹಾರ

mul sortur kolache
Published on

ಮುಳಗುಂದ: ಸಮೀಪದ ಸೊರಟೂರ ಗ್ರಾಮದ ಮುಖ್ಯ ಚರಂಡಿ ಕಾಮಗಾರಿ ಕೈಗೊಳ್ಳದ ಹಿನ್ನೆಲೆ ಕೊಳಚೆ ನೀರು ನಿಂತು ದುರ್ನಾತಕ್ಕೆ ಕಾರಣವಾಗಿದೆ. ಕೆಲವು ಭಾಗಗಳಲ್ಲಿ ಚರಂಡಿಗಳ ವ್ಯವಸ್ಥೆ ಇಲ್ಲ, ಸಿಸಿ ರಸ್ತೆ ಹಾಳಾಗಿದೆ, ಇದರಿಂದ ನಿತ್ಯವು ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ಗ್ರಾಮದ ಟಿಪ್ಪು ಸರ್ಕಲ್ ಹತ್ತಿರ ರಾಜ ಕಾಲುವೆ ಕಾಮಗಾರಿ ಕಳೆದ ಎರಡು ವರ್ಷದಿಂದ ನನೆಗುದಿಗೆ ಬಿದ್ದಿದೆ. ಇದರಿಂದ ಕೊಳಚೆ ನೀರು ಮುಂದೆ ಸಾಗದೆ ಅಲ್ಲೆ ಸಂಗ್ರಹವಾಗಿ ದುರ್ನಾತಕ್ಕೆ ಕಾರಣವಾಗಿದೆ. ಇನ್ನು ಗ್ರಾಮದ ಬಹುತೇಕ ವಾರ್ಡ್​ಗಳಲ್ಲಿ ಸಿಸಿ ರಸ್ತೆಗಳು ಹಾಳಾಗಿದ್ದು, ಇಕ್ಕಟಾದ ಸಂದಿಗಳಲ್ಲಿ ಬೈಕ್ ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿ ಉದ್ಭವಿಸಿದೆ. ವೃದ್ಧರು, ಮಕ್ಕಳು ನಡೆದಾಡುವುದು ಕಷ್ಟವಾಗಿದೆ.

ಈ ಹಿಂದೆ ಜೆಜೆಎಂ ಕಾಮಗಾರಿಗಾಗಿ ರಸ್ತೆ ಮಧ್ಯ ಪೈಪ್ ಅಳವಡಿಕೆಗೆ ತೆಗೆದ ತಗ್ಗುಗಳಲ್ಲಿ ಮನೆಗಳ ಮೋರಿ ನೀರು ಹರಿಯುತ್ತಿದೆ. ಹೀಗಾಗಿ ಮತ್ತಷ್ಟು ಗಲೀಜು ಉಂಟಾಗಿದೆ. ತಗ್ಗುಗಳು ಬಿದ್ದು ತೊಂದರೆ ಆಗುತ್ತಿದೆ. ಗುಂಡಿ ಮುಚ್ಚುವಂತೆ ಹಲವು ಬಾರಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಜೈ ಕರ್ನಾಟಕ ಸಂಘಟನೆಯ ಗದಗ ತಾಲೂಕು ಉಪಾಧ್ಯಕ್ಷ ಇಮಾಮಸಾಬ್ ಮಜ್ಜೂರ ಆಕ್ರೋಶ ವ್ಯಕ್ತಪಡಿಸಿದರು.

ಬಸ್ ಸ್ಟಾ್ಯಂಡ್ ಹತ್ತಿರ ಸರ್ಕಾರಿ ಶಾಲೆ ಮುಂದೆ ಚರಂಡಿಗಳು ಹೂಳು ತುಂಬಿಕೊಂಡಿದೆ. ಪರಿಣಾಮ ಇಲ್ಲಿನ ನೂರಾರು ಮನೆಗಳ ಕೊಳಚೆ ನೀರು ಡಾಂಬರ್ ರಸ್ತೆ ಮೇಲೆ ಹರಿಯುವುದು ಸಾಮಾನ್ಯವಾಗಿದೆ. ಸತತವಾಗಿ ಕೊಳಚೆ ನೀರು ಹರಿಯುವುದರಿಂದ ರಸ್ತೆ ಹಾಳಾಗಿದ್ದು, ಸಾರ್ವಜನಿಕರ ಸಂಚಾರ ದುಸ್ತರವಾಗಿದೆ. ಅಡ್ರಕಟ್ಟೆಯವರ ಪ್ಲಾಟ್​ನಲ್ಲಿ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು, ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.

ಗ್ರಾಮದಲ್ಲಿನ ಚರಂಡಿ ಕಾಮಗಾರಿ ಮತ್ತು ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂದು ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಗ್ರಾಮದಲ್ಲಿನ ಚರಂಡಿ ಸೇರಿ ಹಲವು ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬಿದ್ದಿವೆ. ಕೂಡಲೆ ಸಿಸಿ ರಸ್ತೆ ದುರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಜೆಜೆಎಂ ಕಾಮಗಾರಿಯಿಂದ ಸಿಸಿ ರಸ್ತೆ ಹಾಳಾಗಿದೆ. ಜೆಜೆಎಂ ಯೋಜನೆ ಅನುದಾನದಲ್ಲೆ ಸಿಸಿ ರಸ್ತೆ ದುರಸ್ತಿ ಕಾರ್ಯ ನಡೆಯಬೇಕಿದೆ. | ಮಾಲತೇಶ ಮೇವುಂಡಿ ಸೊರಟೂರ ಗ್ರಾಪಂ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net