ದೊಡ್ಡ ಗ್ರಾಪಂನಲ್ಲಿಲ್ಲ ಕಾಯಂ ಪಿಡಿಒ, ಕಾರ್ಯದರ್ಶಿ

D.14-MDG-1P1 (1)
ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸೇರಿರುವ ಅಧ್ಯಕ್ಷ, ಉಪಾಧ್ಯಕ್ಷೆ, ಸದಸ್ಯರು.
Published on

ಮೂಡಿಗೆರೆ: 22 ಸದಸ್ಯರನ್ನು ಹೊಂದಿರುವ ಮೂಡಿಗೆರೆ ತಾಲೂಕಿನ ದೊಡ್ಡ ಗ್ರಾಪಂ ಗೋಣಿಬೀಡು ಗ್ರಾಮ ಪಂಚಾಯಿತಿಯಲ್ಲಿ ಕಳೆದೊಂದು ವರ್ಷದಿಂದ ಕಾಯಂ ಪಿಡಿಒ ಹಾಗೂ ಕಾರ್ಯದರ್ಶಿ ನೇಮಿಸಿಲ್ಲ ಎಂದು ಮಂಗಳವಾರ ನಡೆದ ಗೋಣಿಬೀಡು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವರ್ಷದಿಂದ ಗ್ರಾಪಂನಲ್ಲಿ ಕಾಯಂ ಪಿಡಿಒ ಹಾಗೂ ಕಾರ್ಯದರ್ಶಿ ಇಲ್ಲದೆ ಕಚೇರಿ ಕೆಲಸಕ್ಕೆ ತೊಂದರೆಯಾಗಿದೆ. ಕಾಯಂ ಅಧಿಕಾರಿಗಳನ್ನು ಗ್ರಾಪಂಗೆ ನೇಮಿಸಬೇಕು ಎಂದು ನಿರ್ಣಾಯ ಕೈಗೊಂಡು ಜಿಪಂಗೆ ಕಳಿಸಿಕೊಟ್ಟು 8 ತಿಂಗಳ ಹಿಂದೆ ಸಿಇಒ ಡಾ.ಗೋಪಾಲಕೃಷ್ಣ ಹಾಗೂ ತಾಪಂ ಇಒ ದಯಾವತಿ ಅವರು ಗ್ರಾಪಂಗೆ ಭೇಟಿ ನೀಡಿ ಸಭೆ ನಡೆಸಿ ಬಿ.ಹೊಸಳ್ಳಿ ಗ್ರಾಪಂ ಪಿಡಿಒ ಅವರನ್ನು ವಾರದಲ್ಲಿ ಎರಡು ದಿನಕ್ಕೆ ಮಾತ್ರ ನಿಯೋಜಿಸಿದ್ದಾರೆ. ಕಾಯಂ ಪಿಡಿಒ ಹಾಗೂ ಕಾರ್ಯದರ್ಶಿ ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದ್ದರೂ ಇದುವರೆಗೂ ಕಾಯಂ ಅಧಿಕಾರಿಗಳನ್ನು ನೇಮಿಸಿಲ್ಲ ಎಂದು ಆರೋಪಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ 18 ಹಳ್ಳಿಗಳಿವೆ. 22 ಮಂದಿ ಸದಸ್ಯರಿದ್ದಾರೆ. ಹಳ್ಳಿಗಳಿಗೆ ಹೋಗಲು ಅಧಿಕಾರಿಗಳಿಗೆ 2 ದಿನದ ಅವಧಿ ಸಾಲದು. ಕಾಯಂ ಪಿಡಿಒ ಮತ್ತು ಕಾರ್ಯದರ್ಶಿ ನೇಮಿಸಬೇಕು. ಅಲ್ಲದೆ ಪ್ರತಿ ಗುರುವಾರ ನಡೆಯುವ ವಾರದ ಸಂತೆ ದಿನ ಪಟ್ಟಣದಲ್ಲಿ ವಾಹನದಟ್ಟಣೆ ಹೆಚ್ಚಾಗಿದೆ. ಸಂತೆಯೊಳಗೆ ವಾಹನಗಳು ಪ್ರವೇಶಿಸಿದಂತೆ ಎಚ್ಚರಿಸಿದರೂ ಪ್ರಯೋಜನವಾಗಿಲ್ಲ. ವಾಹನದಟ್ಟಣೆ ನಿಯಂತ್ರಿಸುವಂತೆ 6 ತಿಂಗಳ ಹಿಂದೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಗೋಣಿಬೀಡು ಪಿಎಸ್‌ಐ ಮತ್ತು ವೃತ್ತ ನಿರೀಕ್ಷಕರಿಗೆ ಕಳಿಸಲಾಗಿತ್ತು. ಇದುವರೆಗೂ ಪೊಲೀಸರು ತಲೆಕೆಡಿಸಿಕೊಂಡಿಲ್ಲ ಎಂದು ಗ್ರಾಪಂ ಅಧ್ಯಕ್ಷ ಜಿ.ಎಸ್.ದಿನೇಶ್ ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net