ಅನ್ನದಾತನ ಸಂಕಷ್ಟ ಕೇಳುವವರಿಲ್ಲ

6 jyp 2
ಸ್ವರ್ಣ ಮೇಧಿನಿ ಚಲನಚಿತ್ರದ ಮಹೂರ್ತ ಕಾರ್ಯಕ್ರಮದಲ್ಲಿ ಶ್ರೀ ವಿನಯ್ ಗುರೂಜಿ ಮಾತನಾಡಿದರು. ಚಂದ್ರಗಿರಿ ದಿನೇಶ್, ಪ್ರದೀಪ್ ಹೆಬ್ಬಾರ್, ರಾಘವೇಂದ್ರ ರೈ ಇತರರಿದ್ದರು.
Published on

ಜಯಪುರ: ದೊಡ್ಡ ದೊಡ್ಡವರ ಕಷ್ಟ ಕೇಳಲು ದೊಡ್ಡ ದೊಡ್ಡವರಿದ್ದಾರೆ. ಆದರೆ ಜಗತ್ತಿಗೆ ಅನ್ನ ನೀಡುವ ದೊಡ್ಡಣ್ಣ ರೈತನ ಕಷ್ಟ ಕೇಳುವ ಮನಸ್ಸು ದೊಡ್ಡವರಿಗಿಲ್ಲ ಎಂದು ಗೌರಿಗದ್ದೆಯ ಶ್ರೀ ವಿನಯ ಗುರೂಜಿ ಹೇಳಿದರು.
ಹೇರೂರು ಗ್ರಾಪಂ ವ್ಯಾಪ್ತಿಯ ಹಾಡುಗಾರಿನ ಶ್ರೀ ವನದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ‘ಸ್ವರ್ಣ ಮೇಧಿನಿ’ ಎಂಬ ನೂತನ ಚಲನಚಿತ್ರದ ಮುಹೂರ್ತದ ವೇಳೆ ಮಾತನಾಡಿದ ಅವರು, ರೈತರ ಬದುಕು ಕಷ್ಟದ ಬದುಕಾಗಿದೆ. ಅಂತಹ ರೈತನ ಕಷ್ಟ ಸುಖಗಳನ್ನು ಚಿತ್ರದ ಮೂಲಕ ಜನರಿಗೆ ತಲುಪಿಸುವ ಕೆಲಸವನ್ನು ನಿರ್ಮಾಪಕ ಚಂದ್ರಗಿರಿ ದಿನೇಶ್ ಮಾಡುತ್ತಿದ್ದಾರೆ. ಕನ್ನಡ ಚಲನಚಿತ್ರಗಳನ್ನು ಕನ್ನಡಿಗರೇ ಬೆಳೆಸಬೇಕಾಗಿದ್ದು, ಪ್ರತಿಯೊಬ್ಬರೂ ಕನ್ನಡ ಚಲನಚಿತ್ರಗಳನ್ನು ನೋಡಬೇಕು. ರೈತರಂತೆ ಕಲಾವಿದರೂ ತಮ್ಮೊಳಗಿನ ನೋವು ಮರೆತು ಪ್ರೇಕ್ಷಕರನ್ನು ನಗಿಸುವ, ಮನರಂಜಿಸುವ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ದೇಶ ವಿದೇಶಗಳಲ್ಲೂ ಯಶಸ್ಸು ಸಿಗುವಂತಾಗಲಿ ಎಂದು ಹಾರೈಸಿದರು.
ನಿರ್ಮಾಪಕ ಚಂದ್ರಗಿರಿ ದಿನೇಶ್ ಮಾತನಾಡಿ, ಮಲೆನಾಡಿನ ಕಥಾ ಹಂದರವಿದೆ. ಹಾಸ್ಯವನ್ನು ಒಳಗೊಂಡ ಮನರಂಜನಾತ್ಮಕ ಚಲನಚಿತ್ರಇದಾಗಿದೆ. ಮಲೆನಾಡಿನ ಸಂಸ್ಕೃತಿ, ರೈತರ ಬದುಕು, ಬವಣೆಯ ಜತೆಗೆ ಉತ್ತಮ ಮನರಂಜನೆಯ ಸನ್ನಿವೇಶಗಳು ಚಿತ್ರದಲ್ಲಿ ಇರಲಿದೆ. ಮಲೆನಾಡಿನ ನೂರಕ್ಕೂ ಹೆಚ್ಚು ಕಲಾವಿದರು ಈ ಚಲನಚಿತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿಯರಾಗಿ ಅಪರ್ಣಾ ಹಾಗೂ ಅನುಷಾ ನಟಿಸುತ್ತಿದ್ದಾರೆ. ಹಾಸ್ಯ ಪಾತ್ರದಲ್ಲಿ ಮಂಗಳೂರು ಮೀನನಾಥ ಖ್ಯಾತಿಯ ರಾಘವೇಂದ್ರ ರೈ, ಶೃಂಗೇರಿ ರಾಮಣ್ಣ, ರಂಗಭೂಮಿ ಕಲಾವಿದ ಶರತ್ ಕುಂಬ್ಳೆ, ತುಪ್ಪೂರು ಮಂಜುನಾಥ್ ಕಾಣಿಸಿಕೊಳ್ಳಲಿದ್ದಾರೆ. ಬಸವರಾಜ್ ಇಂದ್ರ ಛಾಯಾಗ್ರಹಣವಿದ್ದು, ಚಂದ್ರಗಿರಿ ಸಿನಿ ಪ್ರೊಡಕ್ಷನ್‌ನ ಮೊದಲ ಚಿತ್ರ ಇದಾಗಿದೆ ಎಂದರು.
ನಿರ್ದೇಶಕ ಪ್ರದೀಪ್ ಹೆಬ್ಬಾರ್, ರಾಘವೇಂದ್ರ ರೈ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net