ಚುನಾವಣೆ ಘೋಷಣೆ ನಂತರ ಹೊಸ ಕಾಮಗಾರಿ ಇಲ್ಲ

mysore
Published on

ಮೈಸೂರು: ಚುನಾವಣಾ ಘೋಷಣೆಯಾದ ನಂತರ ಯಾವುದೇ ಹೊಸ ಕಾಮಗಾರಿಗಳನ್ನು ಪ್ರಾರಂಭಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.


ಲೋಕಸಭಾ ಚುನಾವಣೆ ಕುರಿತು ಜಿಲ್ಲಾ ಪಂಚಾಯಿತಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಲೋಕೋಪಯೋಗಿ, ನೀರಾವರಿ, ಸೆಸ್ಕ್ ಹಾಗೂ ವಿವಿಧ ತಾಂತ್ರಿಕ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.


ಪ್ರಸ್ತುತ ಪ್ರಾರಂಭಗೊಂಡು ಚಾಲ್ತಿಯಲ್ಲಿರುವ ಕಾಮಗಾರಿ ನಡೆಸಬಹುದಾಗಿದೆ. ಪ್ರಸ್ತುತ ಪ್ರಾರಂಭಗೊಂಡು ಚಾಲ್ತಿಯಲ್ಲಿರುವ ಹಾಗೂ ಘೋಷಣೆ ಮಾಡಲು ಬಾಕಿ ಇರುವ ಕಾಮಗಾರಿಗಳ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಚುನಾವಣೆ ಘೋಷಣೆಯಾದ 24 ಗಂಟೆಗಳಲ್ಲಿ ಸರ್ಕಾರಿ ಕಚೇರಿ ಕಟ್ಟಡ ಸ್ಥಳಗಳಲ್ಲಿ, 48 ಗಂಟೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ 72 ಗಂಟೆಗಳಲ್ಲಿ ಖಾಸಗಿ ಕಟ್ಟಡ ಅಥವಾ ಸ್ಥಳಗಳಲ್ಲಿ ಇರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಪೋಸ್ಟರ್‌ಗಳನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.


ಮತದಾರರು ಹಾಗೂ ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಕುರಿತು ಪರಿಶೀಲಿಸಿಕೊಳ್ಳಬೇಕು. ಚುನಾವಣೆಯ ದಿನದಂದು ಅಧಿಕಾರಿಗಳು ಅಥವಾ ಸಿಬ್ಬಂದಿ ಅವಶ್ಯಕತೆ ಇರುವ ಪೋರ್ಟಲ್ ಅಥವಾ ಎಲೆಕ್ಷನ್ ಡ್ಯೂಟಿ ಸರ್ಟಿಫಿಕೇಟ್‌ಗೆ ನಿಗದಿತ ನಮೂನೆಯಲ್ಲಿ ಮನವಿ ಸಲ್ಲಿಸಬೇಕು ಎಂದರು.


ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ ಗಾಯತ್ರಿ, ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ಆಹಾರ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಶರತ್ ಸೇರಿದಂತೆ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net