

ಹಾನಗಲ್ಲ: ಲೋಕಸಭಾ ಚುನಾವಣೆ ಫಲಿತಾಂಶ ಹೊರಬಂದ ನಂತರ ತಾಲೂಕಿನಲ್ಲಿ ಕಾಂಗ್ರೆಸ್ ಸೋಲಿನ ಆತ್ಮಾವಲೋಕನದಲ್ಲಿದ್ದರೆ, ಬಿಜೆಪಿಯಲ್ಲಿ ಸಂಸದರ ಅಭಿನಂದನೆ ಕಾರ್ಯಕ್ರಮದ ಮೂಲಕ ಚಟುವಟಿಕೆಗಳು ಗರಿಗೆದರಿವೆ.
ನಾಲ್ಕು ದಶಕಗಳ ಸಾಂಪ್ರದಾಯಕ ಎದುರಾಳಿಗಳಾಗಿದ್ದ ಉದಾಸಿ ಹಾಗೂ ಮನೋಹರ ತಹಶೀಲ್ದಾರ ರಾಜಕೀಯ ಹೋರಾಟಕ್ಕೆ ತೆರೆ ಬಿದ್ದಿದೆ. ಲೋಕಸಭೆ ಚುನಾವಣೆಗಿಂತ ಮೊದಲು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ಮನೋಹರ ತಹಶೀಲ್ದಾರ ದಿ.ಸಿ.ಎಂ. ಉದಾಸಿ ಕಟ್ಟಿದ ಬಿಜೆಪಿ ಕೋಟೆಯಲ್ಲಿ ಹೊಸ ಸಂಚಲನ ತಂದಿದ್ದಾರೆ.
ಈ ನಡುವೆ ಎಂಎಲ್ಸಿ ಅಧಿಕಾರಾವಧಿಯಲ್ಲಿ ತಾಲೂಕನ್ನು ರಾಜಕೀಯ ಕ್ಷೇತ್ರವನ್ನಾಗಿಸಿಕೊಂಡ ಹುಬ್ಬಳ್ಳಿ ಮೂಲದ ಶ್ರೀನಿವಾಸ ಮಾನೆ, ಸಿ.ಎಂ. ಉದಾಸಿ ಅವರ ಎದುರಾಳಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡರೂ, ಇಲ್ಲಿಯೇ ನೆಲೆ ಕಂಡುಕೊಂಡರು. ಉಪಚುನಾವಣೆಯಲ್ಲಿ ಸಿಎಂ ಬೊಮ್ಮಾಯಿ ಆದಿಯಾಗಿ ಇಡೀ ಬಿಜೆಪಿ ಸರ್ಕಾರದ ಮಂತ್ರಿಗಳೆಲ್ಲ ಜಿದ್ದಿಗೆ ಬಿದ್ದರೂ, ಮಾನೆ ಗೆದ್ದು ಬೀಗಿದ್ದರು. ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾನೆ ಮತ್ತೆ 22000 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರನ್ನು ಮಣಿಸಿ ಪ್ರಾಬಲ್ಯ ಪ್ರದರ್ಶಿಸಿದರು. ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸಿ ಎರಡು ಬಾರಿ ಬಿಜೆಪಿ ಸೋಲು ಕಂಡಿದ್ದರಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು, ಆತ್ಮವಿಶ್ವಾಸ ಸ್ವಲ್ಪ ಮಟ್ಟಿಗೆ ಕುಸಿದಿತ್ತು.
ವಿಧಾನಸಭೆ ಚುನಾವಣೆ ನಂತರ ಒಂದೇ ವರ್ಷದಲ್ಲಿ ಎದುರಾದ ಲೋಕಸಭಾ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಭಾರಿ ಹಿನ್ನಡೆಯಾಗಿ, ಬಿಜೆಪಿ ಅಭ್ಯರ್ಥಿ 9 ಸಾವಿರ ಮತ ಮುನ್ನಡೆ ಸಾಧಿಸಿದ್ದು ಎರಡೂ ಪಕ್ಷಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕಾಂಗ್ರೆಸ್ನಲ್ಲಿ ಸೋಲಿನ ಪರಾಮರ್ಶೆ ಸಭೆ ಹಾಗೂ ಬಿಜೆಪಿಯ ಅಭಿನಂದನಾ ಸಭೆಗಳು ತಾಲೂಕಿನ ರಾಜಕಾರಣದಲ್ಲಿ ಹೊಸ ಬೆಳವಣಿಗೆಗಳಿಗೆ ಮುನ್ನುಡಿ ಬರೆದಂತೆ ಕಂಡುಬರುತ್ತಿದೆ. ಬಿಜೆಪಿ ಪಾಳಯದಲ್ಲಿ ಈಗ ಹೊಸ ಉತ್ಸಾಹ ಕಂಡುಬಂದಿದೆ. ಸಿ.ಎಂ. ಉದಾಸಿ ನಿಧನಾನಂತರ, ಸಂಸದ ಶಿವಕುಮಾರ ಉದಾಸಿ ರಾಜಕೀಯ ನಿವೃತ್ತಿ ಘೊಷಿಸಿದ ನಂತರ ತಾಲೂಕಿನಲ್ಲಿ ಮೊದಲ ಗೆಲುವು ಇದಾಗಿದೆ. ಹಿಂದಿನ ಎರಡು ಚುನಾವಣೆಗಳಲ್ಲಿ ಸಾಮೂಹಿಕ ನಾಯಕತ್ವದಲ್ಲಿಯೇ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರಾಭವಗೊಂಡಿದ್ದರು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬೊಮ್ಮಾಯಿ ಪೂರ್ಣ ಪ್ರಮಾಣದಲ್ಲಿ ನಾಯಕತ್ವ ವಹಿಸಿಕೊಂಡಿದ್ದಕ್ಕಾಗಿ ಬಿಜೆಪಿ ಬಹುಮತದೊಂದಿಗೆ ಚೈತನ್ಯ ಪಡೆದುಕೊಂಡಿದೆ. ಆದರೆ, ಸ್ಥಳೀಯ ನಾಯಕರು ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಈ ಫಲಿತಾಂಶ ಸ್ಥಳೀಯ ಬಿಜೆಪಿ ನಾಯಕರಿಗೆ ವಾಸ್ತವದ ಪಾಠವಾಗಿದೆ.
ಬಸವರಾಜ ಬೊಮ್ಮಾಯಿ ತಾಲೂಕಿನಲ್ಲಿ ಬಿಜೆಪಿ ಮತದಾರರು, ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ, ನಾಯಕರಿಲ್ಲ ಎಂಬುದನ್ನು ತಿಳಿಸಿದ್ದು ಮಾತ್ರವಲ್ಲ, ಕ್ಷೇತ್ರದಲ್ಲಿ ತಮ್ಮ ನಾಯಕತ್ವ ನೀಡಿ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಬಿಜೆಪಿ ನಾಯಕತ್ವ ನಿರ್ಣಯವಾಗದೇ ಹೋದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಹಿಂದಿನ ಸ್ಥಿತಿ ಮರುಕಳಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಎರಡು ಚುನಾವಣೆಗಳಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದ್ದಕ್ಕೆ ಸ್ಥಳೀಯ ನಾಯಕತ್ವದ ವೈಫಲ್ಯ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ತಾಲೂಕಿನ ಬಿಜೆಪಿ ಘಟಕಕ್ಕೆ ಚಿಕಿತ್ಸೆ, ಚೈತನ್ಯ ನೀಡುವ ಅಗತ್ಯವಿದೆ. ಚೆಲ್ಲಾಪಿಲ್ಲಿಯಾದ ನಾಯಕರು ಒಟ್ಟಾಗಿ ಹೋಗುವ ನಿರ್ಧಾರ ಕೈಗೊಳ್ಳಲು ಇದು ಎಚ್ಚರಿಕೆಯ ಗಂಟೆ ಇದಾಗಿದೆ ಎನ್ನುತ್ತಿದ್ದಾರೆ ಕಾರ್ಯಕರ್ತರು.
ತಾಲೂಕಿನಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ಏನೂ ಕೆಲಸ ಮಾಡುತ್ತಿಲ್ಲ. ರಾಜ್ಯ ಘಟಕದ ನಿರ್ದೇಶನದಂತೆ ಕಾಟಾಚಾರದ ಪ್ರತಿಭಟನೆ ಬಿಟ್ಟರೆ, ಮತದಾರರು ಹಾಗೂ ಸಾಮಾನ್ಯ ಕಾರ್ಯಕರ್ತರ ನೋವಿಗೆ ಸ್ಪಂದಿಸದಿರುವುದು ಬಿಜೆಪಿ ಮಂಕಾಗಲು ಕಾರಣವಾಗಿದೆ ಎಂದೂ ಕೆಲ ತಳಮಟ್ಟದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬಿಜೆಪಿ ಕಾರ್ಯಕರ್ತರ ಅಳಲು ಕೇಳಲು ನಾಯಕರೇ ಇಲ್ಲದಂತಾದ ಸ್ಥಿತಿಯಿತ್ತು. ಸಂಸದರಾಗಿ ಆಯ್ಕೆಯಾಗಿ ಹಾನಗಲ್ಲ ತಾಲೂಕಿನ ಶಾಸಕನಾಗಿಯೂ ಕೆಲಸ ಮಾಡುತ್ತೇನೆ. ಪಟ್ಟಣದಲ್ಲಿ ಕಚೇರಿ ತೆರೆದು ತಾಲೂಕಿನ ಮತದಾರರು, ಕಾರ್ಯಕರ್ತರಿಗೆ ಸ್ಪಂದಿಸುತ್ತೇನೆ ಎಂದಿರುವ ಬಸವರಾಜ ಬೊಮ್ಮಾಯಿ ಮಾತು, ನಾಯಕರಿಲ್ಲ ಎಂಬ ಕೊರಗಿನಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಆಶಾಕಿರಣವಾಗಿದೆ. ಬೊಮ್ಮಾಯಿ ಅಭಿನಂದನಾ ಸಭೆಯಲ್ಲಿ ತಾಲೂಕಿನ ಅಭಿವೃದ್ಧಿ ಹಾಗೂ ವೈಯಕ್ತಿಕ ಸಮಸ್ಯೆಗಳ ಪರಿಹಾರಕ್ಕೆ ಮನವಿಗಳ ಮಹಾಪೂರ ಹರಿದುಬಂದಿರುವುದು ಕಾರ್ಯಕರ್ತರ ವಿಶ್ವಾಸಕ್ಕೆ ಸಾಕ್ಷಿ ಎನ್ನುವಂತಿತ್ತು.
ರಾಜ್ಯ ಸರ್ಕಾರ ತೈಲಬೆಲೆ ಹೆಚ್ಚಳ ಮಾಡಿರುವುದು, ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡದೇ ಇರುವುದು, ಬೆಳೆ ಹಾನಿ ಪರಿಹಾರವಾಗಿ ಮೊದಲು ನೀಡಿದ 2 ಸಾವಿರ ರೂ. ಮುರಿದುಕೊಂಡಿರುವುದು ಸೇರಿ ಅನೇಕ ಸಂಗತಿಗಳು ಬಿಜೆಪಿಗೆ ಅನುಕೂಲಕರ ವಾತಾವರಣ ನಿರ್ವಿುಸಿವೆ. ಪಕ್ಷದ ನಾಯಕರು ಇದನ್ನೆಲ್ಲ ಬಳಸಿಕೊಳ್ಳುವಲ್ಲಿ ಒಗ್ಗಟ್ಟು ತೋರಿಸುವ ಮೂಲಕ ಮುಂದಿನ ಜಿಪಂ, ತಾಪಂ ಚುನಾವಣೆಯಲ್ಲೂ ಶಕ್ತಿ ಪ್ರದರ್ಶನ ಮಾಡುತ್ತಾರೆಯೋ ಎಂಬ ಕುತೂಹಲ ಮೂಡುತ್ತಿದೆ.
ಕಾಂಗ್ರೆಸ್ ಮುಖಂಡರು ಆಗಿರುವ ತಪ್ಪು ತಿದ್ದಿಕೊಂಡು, ಸೋಲಿನ ಕಾರಣ ಹುಡುಕಿ, ಸರಿಪಡಿಸಿಕೊಳ್ಳಲು ಗ್ರಾಮಮಟ್ಟದಲ್ಲಿ ಸಭೆ ಕೈಗೊಂಡು ಕಾರ್ಯಕರ್ತರು, ಮತದಾರರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ. ಈ ಹಿಂದಿನ ಭಾರಿ ಗೆಲುವು ಸಾಧಿಸಿದ್ದನ್ನು ನೆನಪಿಸಿ, ಮತ್ತೆ ಕಾರ್ಯಕರ್ತರಿಗೆ ಮುಂದಿನ ತಾಪಂ ಜಿಪಂ, ಎಪಿಎಂಸಿ ಚುನಾವಣೆ ಗೆಲುವಿಗೆ ಜವಾಬ್ದಾರಿ ನಿಗದಿ ಮಾಡಲಾಗುತ್ತಿದೆ. ಸಭೆಗಳು ಲೋಕಸಭೆ ಸಮರದ ಹಿನ್ನಡೆಯ ಪರಿಣಾಮ ಎಂಬುದರಲ್ಲಿ ಸಂದೇಹವಿಲ್ಲ. ಶಾಸಕ ಶ್ರೀನಿವಾಸ ಮಾನೆ ತಮ್ಮ ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳದಂತೆ ಹುರಿದುಂಬಿಸಲು ಕ್ಷೇತ್ರದ ತುಂಬ ತಿರುಗಾಟಕ್ಕೆ ಮುಂದಾಗಿದ್ದಾರೆ. ತಾಲೂಕಿನ ಅಭಿವೃದ್ಧಿ ಜತೆಗೆ ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮೊಂದಿಗಿರುವೆ ಎಂದು ಹೇಳುತ್ತ ಜಿಪಂ, ತಾಪಂ ಮತ ಬೇಟೆ ಆರಂಭಿಸಿದ್ದಾರೆ.