ಸೋಲೂರು ಬೇರ್ಪಡಿಸುವ ಮಾತು ಬೇಡ

FotoJet
Published on

ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆ *ಮುಖ್ಯಮಂತ್ರಿ ಸಿದ್ಧರಾಮಯ್ಯ ಜತೆ ಚರ್ಚೆ

ಮಾಗಡಿ : ಸೋಲೂರು ಹೋಬಳಿಗೂ ಮಾಗಡಿ ತಾಲೂಕಿಗೂ ಮೊದಲಿನಿಂದಲ್ಲೂ ಭಾವನಾತ್ಮಕ ಸಂಬಂಧವಿದೆ. ಮಾಗಡಿ ತಾಲೂಕಿನಲ್ಲೇ ಸೋಲೂರು ಹೋಬಳಿ ಉಳಿಸುವುದು ಒಳ್ಳೆಯದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಎನ್‌ಇಎಸ್ ವೃತ್ತದ ಬಳಿ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಆಡಳಿತಾತ್ಮಕ ದೃಷ್ಟಿಯಿಂದ ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಬದಲಾವಣೆ ಕೇಳುತ್ತಿದ್ದಾರೆ, ಆಡಳಿತಾತ್ಮಕ ದೃಷ್ಟಿಯಿಂದ ಬದಲಾವಣೆಯಾಗಿ ಮುಂದೆ ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೇರಲಿದೆ. ನಾವೆಲ್ಲ ಅಣ್ಣ ತಮ್ಮಂದಿರು. ಒಟ್ಟಾಗಿ ಇರೋಣ ಮುಂದೆ ಸರಿಪಡಿಸುವ ಕೆಲಸ ಮಾಡಲಾಗುತ್ತದೆ. ಹಳೆಯ ಸಂಬಂಧವನ್ನು ನಾವೆಲ್ಲರೂ ಉಳಿಸಿಕೊಳ್ಳೋಣ ಎಂದರು.
ಯಾರೋ ಬಂದು ಸೋಲೂರು ಹೋಬಳಿಯನ್ನು ಬೇರ್ಪಡಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ. ಸೋಲೂರನ್ನು ಮಾಗಡಿ ತಾಲೂಕಿನಿಂದ ಬೇರ್ಪಡಿಸಬೇಡಿ ಎಂದು ಸಿಎಂಗೆ ಮನವಿ ನೀಡಲಾಗಿದೆ. ಮುಂದೆ ಕ್ಷೇತ್ರ ಮರುವಿಂಗಡಣೆ ವೇಳೆ ಸೋಲೂರು ಮಾಗಡಿ ಕ್ಷೇತ್ರಕ್ಕೆ ಸೇರಲಿದೆ. ನಮ್ಮ ಜಿಲ್ಲೆಗೆ ಸೇರಲಿದೆ. ಅವೈಜ್ಞಾನಿಕ ಕ್ಷೇತ್ರ ಮರುವಿಂಗಡಣೆ, ಜಿಲ್ಲೆಯಿಂದಾಗಿ ವ್ಯತ್ಯಾಸವಾಗಿದೆ. ಸಹಕಾರಿ ಕ್ಷೇತ್ರ ಸೇರಿ ಎಲ್ಲ ವಿಚಾರದಲ್ಲೂ ಅವರಿಗೆ ಗೌರವ ಬರುವ ರೀತಿ ನಡೆದುಕೊಂಡಿದ್ದೇವೆ ಎಂದರು.
ಪುರಸಭಾಧ್ಯಕ್ಷೆ ರಮ್ಯಾ ನರಸಿಂಹಮೂರ್ತಿ, ಉಪಾಧ್ಯಕ್ಷ ರಿಯಾಜ್, ಸದಸ್ಯರಾದ ಎಚ್.ಜೆ.ಪುರುಷೋತ್ತಮ್, ಶಿವಕುಮಾರು, ರಂಗಹನುಮಯ್ಯ, ಆನಂದ್, ರಘು, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಬಿಎಂಆರ್‌ಡಿಎ ನಿರ್ದೇಶಕ ತೇಜಮೂರ್ತಿ, ಕೆಂಪೇಗೌಡ, ಶೈಲಜಾ, ಎಂಆರ್.ಮಂಜುನಾಥ್, ಕೇಬಲ್ ಮಂಜುನಾಥ್ ಇದ್ದರು.

ನಿವೇಶನ ವಾಪಸ್ ನೀಡಿದರೆ ದೇಶ ಸುಭಿಕ್ಷ
ಮುಡಾ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ನಿವೇಶನಗಳನ್ನು ವಾಪಸ್ ನೀಡಿದಂತೆ ಯಾರ ಮೇಲೆ ಆರೋಪ ಇದೆಯೋ ಅವರೆಲ್ಲರೂ ನಿವೇಶನ ವಾಪಸ್ ನೀಡಿದರೆ ದೇಶ ಸುಭಿಕ್ಷವಾಗುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು. ಸಿಎಂ ಅವರ ಪತ್ನಿ ತಪ್ಪನ್ನು ಒಪ್ಪಿಕೊಂಡು ನಿವೇಶನ ವಾಪಸ್ ನೀಡಿಲ್ಲ. ಸಿಎಂ ಅವರ ಮೇಲೆ ಸಾರ್ವಜನಿಕವಾಗಿ ಬಂದಿರುವ ಕಳಂಕ ನಿವಾರಣೆಗೆ ನಿವೇಶನ ವಾಪಸ್ ನೀಡಿದ್ದಾರೆ ಎಂದರು.
ಸಿದ್ದರಾಮಯ್ಯ ಅವರ 60 ವರ್ಷದ ರಾಜಕೀಯ ಜೀವನದಲ್ಲಿ ಯಾವತ್ತೂ ಕಳಂಕ ಬಂದಿಲ್ಲ. ನನ್ನಿಂದ ಕಳಂಕ ತಟ್ಟಿದೆ, ಅವರ ವ್ಯಕ್ತಿತ್ವಕ್ಕಿಂತ ಅಸ್ತಿ ದೊಡ್ಡದಲ್ಲ ಎಂದು ಅವರ ಪತ್ನಿ ವಾಪಸ್ ನೀಡಿದ್ದಾರೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂಡಾದವರು ನಿವೇಶನ ಮಂಜೂರು ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮಂಜೂರು ಮಾಡಿಲ್ಲ. ಗೌರವ ಉಳಿಸಿಕೊಳ್ಳಬೇಕು ಎಂದರು. ಸಿದ್ದರಾಮಯ್ಯ ಆಸ್ತಿ ಮಾಡಿದ್ದರೆ ಅರ್ಧ ಬೆಂಗಳೂರಿನಷ್ಟು ಅಸ್ತಿ ಮಾಡಬಹುದಿತ್ತು, ಅವರು ಮನಸ್ಸು ಮಾಡಿದರೆ ಬೆಂಗಳೂರಿನಲ್ಲಿ 140 ನಿವೇಶನ ಕೊಡುವವರು ಇದ್ದಾರೆ. 14 ನಿವೇಶನಗಳನ್ನು ಇಟ್ಟುಕೊಂಡು ಅಳ್ಳಾಡಿಸಿಕೊಂಡು ಕುಳಿತಿದ್ದಾರೆ, ವಿರೋಧ ಪಕ್ಷಗಳು ಬೆಳಗ್ಗೆ ಆದರೆ ಸಿಎಂ ಅವರ ರಾಜೀನಾಮೆ, ರಾಜೀನಾಮೆ ಎನ್ನುತ್ತಾರೆ. ಮತ್ತೇನು ಕೆಲಸ ಅವರಿಗೆ ಎಂದು ವಿರೋಧ ಪಕ್ಷಗಳ ವಿರುದ್ಧ ಬಾಲಕೃಷ್ಣ ವಾಗ್ದಾಳಿ ನಡೆಸಿದರು.

ಮಾಗಡಿಗೆ ವಿಮಾನ ನಿಲ್ದಾಣ ಬೇಡ
ಮಾಗಡಿ-ನೆಲಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ಆಗಲಿದೆ ಎಂಬುದು ಉಹಾಪೋಹ. ಇನ್ನೂ ಯಾವುದೇ ತೀರ್ಮಾನವಾಗಿಲ್ಲ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಾಗುತ್ತಿದೆ, ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ, ಏರ್‌ಪೋರ್ಟ್ ಅನುಮತಿ ಬೇಕಿದೆ. ಎಲ್ಲರ ಅನುಮತಿ ಪಡೆದು ತೀರ್ಮಾನವಾಗಲಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ನಮ್ಮನ್ನು ಕರೆದು ಸಭೆ ನಡೆಸಿಲ್ಲ, ಎಲ್ಲಿ ನಿರ್ಮಾಣ ಮಾಡಬೇಕು ಎಂದು ಸಾಧಕ, ಭಾಧಕಗಳು ನಡೆಯುತ್ತಿವೆ, ಇದು ವೈಜ್ಞಾನಿಕವಾಗಿ ಅನುಕೂಲವಾಗಬೇಕು ಎಂದರು.
ಮಾಗಡಿ ತಾಲೂಕಿನಲ್ಲಿ ವಿಮಾನ ನಿಲ್ದಾಣ ಸೂಕ್ತವಲ್ಲ ಎನ್ನುತ್ತೇನೆ. ದೇವನಹಳ್ಳಿ ತಾಲೂಕಿನಲ್ಲಿನ ವಿಮಾನ ನಿಲ್ದಾಣಕ್ಕೆ ರೈತರು ಜಮೀನು ನೀಡಿ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆ ರೀತಿ ನಮ್ಮತಾಲೂಕಿನ ರೈತರಿಗೆ ಆ ದುಸ್ಥಿತಿ ಬೇಡ. ದೇವನಹಳ್ಳಿ, ಹಾರೋಹಳ್ಳಿ, ತುಮಕೂರಿನಲ್ಲಿ ವಿಮಾನ ನಿಲ್ದಾಣ ಮಾಡಲಿ, ನಾವು ಅಲ್ಲಿಗೆ ಹೋಗಿ ವಿಮಾನ ಹತ್ತಿಕೊಳ್ಳುತ್ತೇವೆ. ನಮ್ಮ ತಾಲೂಕಿನವರು ವಿಮಾನದಲ್ಲಿ ಓಡಾಡುವವರು ಕಡಿಮೆ, ನಾವು ಬಸ್‌ನಲ್ಲಿ, ಕಾರಿನಲ್ಲಿ ಓಡಾಡುವ ಜನ. ನಮ್ಮ ತಾಲೂಕಿನಲ್ಲಿ ವಿಮಾನ ನಿಲ್ದಾಣ ಸೂಕ್ತವಲ್ಲ ಎಂದು ಹೇಳಿದರು.

ಬೆಂಗಳೂರಿನಿಂದ ತಾವರೆಕೆರೆವರೆಗೂ ಮೆಟ್ರೋ ನಿರ್ಮಾಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ, ನಂತರ ಮಾಗಡಿಗೆ ತರಲಾಗುವುದು.- ಎಚ್.ಸಿ.ಬಾಲಕೃಷ್ಣ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net