

ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯ ನಕ್ಸಲ್ ಚಟುವಟಿಕೆ ಜಿಲ್ಲೆಯ ಚುನಾವಣೆ ಮೇಲೆ ಪ್ರಭಾವ ಬಿರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ನಗರದಲ್ಲಿ ಬುಧವಾರ ಸಂವಾದ ನಡೆಸಿದ ಅವರು, ಜಿಲ್ಲೆಯ ಗಡಿಭಾಗದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯ ಇತರೆಡೆ ನಕ್ಸಲ್ ಚಟುವಟಿಕೆ ಕಂಡುಬಂದಿಲ್ಲ. ಎಸ್‌ಪಿ ಮಿಥುನ್‌ಕುಮಾರ್ ಅವರು ನಕ್ಸಲ್ ನಿಗ್ರಹ ಪಡೆ ಜತೆ ಸಭೆ ನಡೆಸಿ ವಾಸ್ತವ ಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಹೇಳಿದರು.
ಸೂಕ್ಷ್ಮ ಮತ್ತು ಅತಿಸೂಕ್ಷ್ಮಮತಗಟ್ಟೆಗಳ ರಚನೆ ಮಾಡಲಾಗಿದೆ. ಹಿಂದಿನ ಬಾರಿ ಕಡಿಮೆ ಮತದಾನ ಆಗಿರುವ ಬೂತ್ ಅಥವಾ ಪ್ರದೇಶಗಳಲ್ಲಿ ಮತದಾನ ಹೆಚ್ಚಿಸಲು ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಸಲು ಸಕಲ ರೀತಿ ಸಿದ್ಧತೆ ನಡೆಸಿದ್ದು, 78 ಫ್ಲೆಯಿಂಗ್ ಸ್ಕ್ವಾಡ್ ರಚಿಸಲಾಗಿದೆ. ಸಾರ್ವಜನಿಕ ವಾಹನಗಳು, ಅನುಮಾನ ಬಂದರೆ ಆಂಬುಲೆನ್ಸ್ ಸೇರಿ ಎಲ್ಲ ಸರ್ಕಾರಿ ವಾಹನಗಳನ್ನೂ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ 15 ರೌಡಿಶೀಟರ್‌ಗಳ ಗಡಿಪಾರಿಗೆ ಇಬ್ಬರು ಉಪವಿಭಾಗಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪೇಯ್ಡ್ ನ್ಯೂಸ್ ಗಮನಿಸಲು ಕಮಿಟಿ ಮಾಡಲಾಗಿದೆ ಎಂದರು.